ವಿಜಯಸಾಕ್ಷಿ ಸುದ್ದಿ, ಗದಗ : 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿಪೂರ್ವ ಕಾಲೇಜುಗಳು ಪ್ರಾರಂಭವಾಗಿದ್ದು, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದಿಂದ ಕರ್ನಾಟಕ-ಒನ್ ಹಾಗೂ ಗ್ರಾಮ-ಒನ್ ಕೇಂದ್ರಗಳ ಮುಖಾಂತರ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಅವರು ಬುಧವಾರ ಸಿ.ಬಿ.ಟಿ ಹುಬ್ಬಳ್ಳಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪಾಸ್ ವಿತರಣೆ ಕುರಿತು ಪರಿಶೀಲಿನೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ಓರ್ವ ವಿದ್ಯಾರ್ಥಿಯ ಬಸ್ ಪಾಸನ್ನು ವ್ಯವಸ್ಥಾಪಕ ನಿರ್ದೇಶಕರು ವಿತರಣೆ ಮಾಡಿದರು. ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದೇಶಿಸಿದರು.
ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ ಮತ್ತು ಹುಬ್ಬಳ್ಳಿ ಗ್ರಾಮಾಂತರ ವಿಭಾಗಗಳಿಗೆ ಭೇಟಿ ನೀಡಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ಕಛೇರಿಯಲ್ಲಿ ಸಭೆ ನಡೆಸಿದರು. ಸಿ.ಬಿ.ಟಿ. ಬಹುಮಹಡಿ ಕಟ್ಟಡದ ವಾಣಿಜ್ಯ ಮಳಿಗೆಗಳನ್ನು, ಬಸ್ ನಿಲ್ದಾಣದ ಸ್ವಚ್ಛತೆಯನ್ನು ಪರಿಶೀಲಿಸಿದರು.