ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ:
ನಾಡಿನಾದ್ಯಂತ ಸಾಹಿತಿಗಳು, ಕಸಾಪ ಸದಸ್ಯರು ಹಾಗೂ ಮಠಾಧೀಶರು ಸೇರಿದಂತೆ ಪ್ರತಿಯೊಬ್ಬರು ತೋರುತ್ತಿರುವ ಪ್ರೀತಿಯನ್ನು ನೋಡಿದರೇ ನನಗೆ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಹೇಳಿದರು.
ಕೊಪ್ಪಳದಲ್ಲಿ ಬುಧವಾರ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನು ಭೇಟಿಯಾಗಿ, ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೆಲ್ಲುವ ವಿಶ್ವಾಸ ಹೆಚ್ಚುತ್ತಿದೆ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಯಾಗಿರುವ ನಾನು ರಾಜ್ಯದ ಬಹುತೇಕ ಜಿಲ್ಲೆಗಳನ್ನು ಸುತ್ತಾಡಿದ್ದೇನೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ, ಬೆಂಗಳೂರು ಭಾಗದ ಜಿಲ್ಲೆಗಳು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಾನು ನಿರೀಕ್ಷೆ ಮಾಡಿದ್ದಕ್ಕೂ ಮೀರಿ ಸಾಹಿತಿಗಳು, ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ತುಂಬು ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ ಎಂದರು.
ನಾನು ನೆಪ ಮಾತ್ರ ಎನ್ನುವಂತೆ ಅವರೇ ಸ್ವಯಂ ಪ್ರೇರಣೆಯಿಂದ ಈಗಾಗಲೇ ನನ್ನ ಪರವಾಗಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.
ಇದರಿಂದ ನನಗೆ ಅತೀವ ವಿಶ್ವಾಸ ಮೂಡಿದ್ದು, ಇನ್ನು ಹೆಚ್ಚು ಹೆಚ್ಚು ಬೆಂಬಲ ಪಡೆಯುವುದಕ್ಕಾಗಿ ಸುತ್ತಾಟ ನಡೆಸಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಇದುವರೆಗೂ ಸಾಮಾನ್ಯ ವರ್ಗವನ್ನು ಮತ್ತು ಗ್ರಾಮೀಣ ಪ್ರದೇಶವನ್ನು ತಲುಪಿಲ್ಲ ಎನ್ನುವ ಆರೋಪ ಇದ್ದು, ಇದನ್ನು ತೊಡೆದು ಹಾಕಬೇಕು ಎನ್ನುವುದೇ ಹೆಬ್ಬಯಕೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇನ್ನಷ್ಟು ಅರ್ಥಪೂರ್ಣ ಮಾಡುವುದು ಮತ್ತು ನೂತನ ಬರಹಗಾರರನ್ನು ಗುರತಿಸುವ ಪ್ರಯತ್ನ ಮಾಡಬೇಕು ಎಂದುಕೊಂಡಿದ್ದೇನೆ.
ಇದೆಲ್ಲಕ್ಕಿಂತ ಮಿಗಿಲಾಗಿ ಸಾಹಿತ್ಯ ಸಮ್ಮೇಳನ ಕೇವಲ ಒಂದು ವರ್ಗದ ಸಮ್ಮೇಳನವಾಗದೆ ಅದನ್ನು ಇಡೀ ನಾಡಿನ ಜನಜಾತ್ರೆ ಮಾಡಬೇಕಾಗಿದೆ. ಅದಕ್ಕೊಂದು ಸಾಮಾಜಿಕ ಜಾಗೃತಿಯ ಸ್ಪರ್ಶ ನೀಡಬೇಕಾಗಿದೆ. ಈ ರೀತಿಯ ಕನಸು ಕಟ್ಟಿಕೊಂಡಿರುವ ನಾನು ಅವಕಾಶವನ್ನು ನೀಡುವಂತೆ ಮನವಿ ಮಾಡಿದ್ದಕ್ಕೆ ಉತ್ತಮ ಪ್ರತಿಕ್ರಿಯೇ ಮತ್ತು ಪ್ರೀತಿ ವ್ಯಕ್ತವಾಗುತ್ತಿರುವುದರಿಂದ ನನ್ನ ಉತ್ಸಾಹ ಇಮ್ಮಡಿಯಾಗಿದೆ ಎಂದು ತಿಳಿಸಿದರು.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಹ ನನಗೆ ಆಶಿರ್ವಾದ ಮಾಡಿದ್ದು ಸಂತೋಷವಾಗಿದೆ. ಅವರ ಆಶಿರ್ವಾದ ಇರುವುದು ನನ್ನ ಹೋರಾಟಕ್ಕೆ ನೂರಾನೆ ಬಲ ಬಂದಿದೆ ಎಂದರು.
ಕಸಪಾ ಕೊಪ್ಪಳ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಶರಣೇಗೌಡ ಪೊಲೀಸ್ ಪಾಟೀಲ್, ರಾಮಚಂದ್ರ ಗೊಂಡಬಾಳ, ಚನ್ನಪ್ಪ ಕಡ್ಡಿಪುಡಿ, ಈಶಪ್ಪ ದಿನ್ನಿ, ನಾಗರಾಜನಾಯಕ ಡೊಳ್ಳಿನ, ರುದ್ರೇಶ ಅರಾಳ, ಹಾಲಯ್ಯ ಹುಡೇಜಾಲಿ, ವೀರೇಶ ತಾಳಿಕೋಟಿ, ಹಾವೇರಿ ಎಂ. ಎಸ್. ದಂಡಿನ್ ಮೊದಲಾದವರು ಇದ್ದರು.