ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಾ ಕೇಂದ್ರದ ಹಂಗನಕಟ್ಟಿ ರಸ್ತೆಗೆ ಹೊಂದಿಕೊಂಡಿರುವ ರುದ್ರಭೂಮಿ ಕೇವಲ ಹೆಸರಿಗಷ್ಟೇ ಸಿಮೀತವಾದಂತೆ ಕಾಣುತ್ತಿದ್ದು, ಅವ್ಯವಸ್ಥೆಗಳ ಆಗರವಾಗಿದೆ. ಈ ರುದ್ರಭೂಮಿಗೆ ಕಾಯಕಲ್ಪ ಯಾವಾಗ ಎಂಬ ಪ್ರಶ್ನೆ ಪಟ್ಟಣದ ಸಾರ್ವಜನಿಕರನ್ನು ಕಾಡುತ್ತಿದೆ.
ರುದ್ರಭೂಮಿಯಲ್ಲಿ ಬಹಳ ವರ್ಷಗಳ ಹಿಂದೆಯೇ ಪಟ್ಟಣ ಪಂಚಾಯತ ವತಿಯಿಂದ ಬೋರ್‌ವೆಲ್ ಹಾಕಲಾಗಿದ್ದು, ಅಂತ್ಯಕ್ರಿಯೆಗೆ ಬರುವ ಜನತೆಗೆ ಅನುಕೂಲವಾಗುವುದಕ್ಕೆ ಸಿಸ್ಟರ್ನ್ಗೆ ಪೈಪ್‌ಲೈನ್ ಜೋಡಣೆಯನ್ನು ಸಹ ಮಾಡಲಾಗಿದೆ. ಆದರೆ ಇದರಲ್ಲಿ ಒಂದು ಹನಿ ನೀರು ಕೂಡಾ ಜನತೆಗೆ ಸಿಗುತ್ತಿಲ್ಲ.
ಇದರ ಉಪಯೋಗ ಜನತೆಗೆ ಆಗದೇ ಬೀಕೋ ಎನ್ನುತ್ತಿದೆ. ಹಾಗಾದರೆ ಈ ವ್ಯವಸ್ಥೆ ಯಾವ ಪುರುಷಾರ್ಥಕ್ಕಾಗಿ, ಸರಕಾರದ ಅನುದಾನ ಈ ರೀತಿ ಬೇಕಾಬಿಟ್ಟಿಯಾಗಿ ವಿನಿಯೋಗಿಸಿದರೆ ಇದಕ್ಕೆ ಯಾರು ಹೊಣೆ ಎನ್ನುವುದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಉತ್ತರಿಸಬೇಕಿದೆ.
ರುದ್ರಭೂಮಿಯಲ್ಲಿ ಸಮರ್ಪಕ ವಿದ್ಯುತ್ ದೀಪದ ವ್ಯವಸ್ಥೆಯೂ ಇಲ್ಲದಿರುವುದರಿಂದ ರಾತ್ರಿ ವೇಳೆಯಲ್ಲಿ ಮೃತರ ಅಂತ್ಯಕ್ರಿಯೆಗೆ ಆಗಮಿಸುವ ಜನತೆ ಭಯಭೀತರಾಗುತ್ತಿದ್ದಾರೆ. ಕುಳಿತುಕೊಳ್ಳುವದಕ್ಕೆ ಸಮರ್ಪಕ ಆಸನದ ವ್ಯವಸ್ಥೆ, ಸಮರ್ಪಕ ಗೇಟ್ ವ್ಯವಸ್ಥೆಯೂ ಇಲ್ಲದಾಗಿದೆ.
ರುದ್ರಭೂಮಿಯನ್ನು ಸ್ವಚ್ಛಗೊಳಿಸದೇ ಇರುವದರಿಂದ ಎಲ್ಲೆಂದರಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದು, ಮೃತರ ಅಂತ್ಯಕ್ರಿಯೆ ನಡೆಸಲು ಇಲ್ಲಿ ಜನತೆ ಹರಸಾಹಸ ಪಡುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಈ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ ಹೊಸದಾಗಿ ಗಿಡಗಳನ್ನು ನೆಟ್ಟು ಜನತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕಿದೆ.
ಕೆಲವು ಸ್ಥಳಗಳಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಥಳಾವಕಾಶವೇ ಇರುವುದಿಲ್ಲ. ಆದರೆ ಇಲ್ಲಿ ಸರಕಾರ ಸೂಕ್ತ ಸ್ಥಳಾವಕಾಶ ಕಲ್ಪಿಸಿದ್ದರೂ ಸಹ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಲೋ ಅಥವಾ ನಿರ್ಲಕ್ಷ್ಯದಿಂದಲೋ ಜನತೆಗೆ ಅನುಕೂಲ ಕಲ್ಪಿಸುವಲ್ಲಿ ಮೀನ-ಮೇಷ ಎಣಿಸುತ್ತಿರುವುದು ಸರಿಯೇ ಎಂದು ಸಂಬಂಧಿಸಿದ ಅಧಿಕಾರಿಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಬೋರ್‌ವೆಲ್‌ಗೆ ಶೀಘ್ರವೇ ಸಂಪರ್ಕ ನೀಡಲಾಗುವುದು. ರುದ್ರಭೂಮಿಗೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಕ್ಕೂ ಸಹ ಕ್ರಮ ಕೈಕೊಳ್ಳಲಾಗುವುದು ಎಂದರು.
ಪ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪರಮೇಶ ಪರಬ ಪ್ರತಿಕ್ರಿಯಿಸಿ, ಪಟ್ಟಣ ಪಂಚಾಯಿತಿ ವತಿಯಿಂದ ರುದ್ರಭೂಮಿಗೆ ಅವಶ್ಯಕವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.