ಪರಿಸರ ಸಕಲ ಜೀವರಾಶಿಗಳ ಜೀವಾಳ : ಡಾ. ಎಂ.ಎಸ್. ಉಪ್ಪಿನ

0
World Environment Day Celebration at Basava Yoga Centre
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗಿಡಮರಗಳು ಸಕಲ ಜೀವಿಗಳಿಗೆ ಉಪಕಾರಿಯಾಗಿವೆ. ಪಶು-ಪಕ್ಷಿಗಳಿಗೆ ಆಹಾರ, ಆಶ್ರಯ ನೀಡುತ್ತವೆ. ಪೂಜೆ, ಅಲಂಕಾರಕ್ಕೆ ಬಗೆಬಗೆಯ ಹೂವು, ಹಣ್ಣುಗಳನ್ನು ಕೊಡುತ್ತವೆ, ದಣಿವು ನಿವಾರಣೆಗೆ ನೆರಳು ನೀಡುತ್ತವೆ, ಹೆಚ್ಚಿನ ತಾಪಮಾನ ನಿಯಂತ್ರಿಸುತ್ತವೆ, ಮಳೆ ಸುರಿಸುತ್ತಿವೆ. ಎಲ್ಲಕ್ಕೂ ಮಿಗಿಲಾಗಿ ಎಲ್ಲರೂ ಜೀವಿಸಿರಲು ಶುದ್ಧ ಗಾಳಿ ಉತ್ಪಾದಿಸುತ್ತವೆ. ಗಿಡಮರಗಳ ಈ ಎಲ್ಲ ಉಪಯೋಗವನ್ನು ಜಾತಿ-ಮತ-ಪಂಥಗಳ, ಬೇಧ-ಭಾವ, ಭಿನ್ನತೆ ಇಲ್ಲದೆ ನಾವೆಲ್ಲ ಪಡೆಯುತ್ತೇವೆ. ಹೀಗಾಗಿ ಗಿಡಮರಗಳು `ಸಮಾನತೆ’ಯ ಹರಿಕಾರರೆನ್ನಬಹುದು ಎಂದು ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಸಿದ್ಧಲಿಂಗ ನಗರ ಇವರ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ(ಬಸವಪ್ರಭೆ ಕ್ಯಾಂಪಸ್)ದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು ನೆಟ್ಟ ಸಸಿ ದೊಡ್ಡದಾಗಿ ಬೆಳೆಯುವವರೆಗೆ ಕಾಳಜಿ ವಹಿಸಬೇಕು. ಪರಿಸರ ಸಂರಕ್ಷಣೆ ನಮ್ಮ ಮೂಲಭೂತ ಕರ್ತವ್ಯವಾಗಬೇಕು. ನಮ್ಮ ಕೌಟುಂಬಿಕ ಕಾರ್ಯಕ್ರಮಗಳನ್ನು ಸಸಿ ನೆಡುವ ಮೂಲಕ ಆಚರಿಸಿ ಅವನ್ನು ಸಾಮಾಜಿಕ ಕಾರ್ಯಕ್ರಮಗಳನ್ನಾಗಿ ರೂಪಿಸಬೇಕೆಂದು ಸೂಚಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಮಾತನಾಡಿ, ನಾವು ಆರೋಗ್ಯದಿಂದಿರಬೇಕಾದರೆ ಆಹಾರ, ನೀರುಗಳಂತೆ ಗಾಳಿಯೂ ಅಗತ್ಯವಾಗಿದೆ. ಗಾಳಿ ಇರದಿದ್ದರೆ ನಾವಿಲ್ಲ. ಅದಕ್ಕಾಗಿ ಜೀವಮಾನದಲ್ಲಿ ಒಂದು ಗಿಡವನ್ನಾದರೂ ಬೆಳೆಸಲು ಪ್ರಯತ್ನಿಸಬೇಕೆಂದರು. ನಿವೃತ್ತ ಗ್ರಂಥಪಾಲಕ ವಿ.ಎಂ. ಮುಂದಿನಮನಿ ಮಾತನಾಡಿದರು.

ಗೌರಿ ಜಿರಂಕಳಿ, ಸುನಂದಾ ಜಾನೋಪಂತರ ಪರಿಸರ ಗೀತೆ ಹೇಳಿದರು. ಮುಂಬರುವ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಗದಗ ಜಿಲ್ಲಾ ಮಟ್ಟದಲ್ಲಿ ಜರುಗುವ `ಯೋಗ ಸಾಂಘಿಕ ಕಾರ್ಯಕ್ರಮ’ಗಳ ಮಾಹಿತಿ ಪತ್ರಿಕೆಗಳನ್ನು ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ನಿವೃತ್ತ ಇಂಜಿನಿಯರ್ ವಿ.ಎಚ್. ಪಾಟೀಲ, ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲತ್ವಾಡಮಠ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಹಿರಿಯ ಸದಸ್ಯೆ ಅರುಣಾ ಇಂಗಳಳ್ಳಿ, ನವೀನ ಪಲ್ಲೇದ ಉಪಸ್ಥಿತರಿದ್ದರು. ಗಿರಿಜಾ ನಾಲತ್ವಾಡಮಠ ಮತ್ತು ಸಂಗಡಿಗರು ಪ್ರಾರ್ಥನೆ ಹೇಳಿದರು. ವಿ.ಎಂ. ಮುಂದಿನಮನಿ ಸ್ವಾಗತಿಸಿದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿದರು. ಶಾಂತಾ ಮುಂದಿನಮನಿ ಕಾರ್ಯಕ್ರಮ ನಿರೂಪಿಸಿದರು. ವಿಜಯಾ ಚನ್ನಶೆಟ್ಟಿ ವಂದಿಸಿದರು.

ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಡಿ.ಜಿ. ಕೋಲ್ಮಿ ಮಾತನಾಡಿ, ವಿಶ್ವ ಪರಿಸರ ದಿನದಂದು ಔಷಧಿ ಸಸ್ಯಗಳನ್ನು ನೆಟ್ಟು ಬೆಳೆಸಿದರೆ ಪರಿಸರದ ಅವಿಭಾಜ್ಯ ಅಂಗವಾದ `ಆರೋಗ್ಯ’ ಸಂರಕ್ಷಣೆ ಮಾಡಿದಂತಾಗುವುದು. ಔಷಧಿ ಸಸ್ಯಗಳನ್ನು ಮನೆಯಲ್ಲಿರುವ ಕುಂಡಾಲಿಯಲ್ಲೂ ಬೆಳೆಸಬಹುದು. ಇಚ್ಛಿತರು ನಮ್ಮ ಕಾಲೇಜ ಔಷಧಿವನಕ್ಕೆ ಬಂದರೆ ಉಚಿತವಾಗಿ ಪೂರೈಸುತ್ತೇವೆ ಎಂದರು.


Spread the love

LEAVE A REPLY

Please enter your comment!
Please enter your name here