ಪ್ರಜೆಗಳ ರಾಜ ಮಹಾರಾಣಾ ಪ್ರತಾಪಸಿಂಹ

0
484th birth anniversary of Maharana Pratapasimha
Spread the love

ಸನಾತನ ಭಾರತದ ಇತಿಹಾಸದಲ್ಲಿ ರಜಪೂತರಿಗೆ ವಿಶೇಷವಾದ ಸ್ಥಾನ. ಯುದ್ಧ ಭೂಮಿಯಲ್ಲಿ ರಜಪೂತ ವೀರರು ತೋರಿಸಿದ ಅಪ್ರತಿಮ ಧೈರ್ಯ, ತ್ಯಾಗ, ಬಲಿದಾನದ ದಂತ ಕಥೆಗಳಿಗೆ ಕೊನೆ ಮೊದಲಿಲ್ಲ.

Advertisement

ರಾಜಸ್ಥಾನದ ಮರಭೂಮಿಯ ಕಣ-ಕಣಗಳು, ಅರಾವಲಿ ಬೆಟ್ಟ-ಗುಡ್ಡಗಳ ಸಾಲು, ಇಲ್ಲಿನ ಕೋಟೆ ಕೊತ್ತಲಗಳು ರಜಪೂತರ ಅಪ್ರತಿಮ ಧೈರ್ಯದ ಕಥೆಗಳನ್ನು ಸಾರಿ ಹೇಳುತ್ತಲಿವೆ. ಇಲ್ಲಿನ ನದಿ, ಹಳ್ಳ-ಕೊಳ್ಳಗಳಲ್ಲಿ ರಜಪೂತರ ಪರಾಕ್ರಮ, ಶೌರ್ಯ ಪ್ರತಿಧ್ವನಿಗೊಳ್ಳುತ್ತಲಿದೆ. ಇಲ್ಲಿ ಸಣ್ಣಪುಟ್ಟ ರಾಜ್ಯಗಳು-ರಾಜರು, ದೊರೆಗಳು, ರಾಣಾಗಳಿಗೆ ಕೊರತೆ ಇಲ್ಲ. ಇದರಲ್ಲಿ ಮೇವಾಡ ರಾಜ್ಯಕ್ಕೆ ಕಳಶಪ್ರಾಯ ಸ್ಥಾನ.

ಮಹಾರಾಣಾ ಪ್ರತಾಪಸಿಂಹ ಎಂದರೆ ಭಾರತದ ಕ್ಷಾತ್ರತೇಜದ, ಪರಾಕ್ರಮದ ಒಟ್ಟುಗೂಡಿದ ವ್ಯಕ್ತಿ, ಶಕ್ತಿ ಎಂದರೆ ಅತಿಶಯೋಕ್ತಿ ಅಲ್ಲ. ರಾಣಾ ಉದಯಸಿಂಗ ಹಾಗೂ ಜೈವಂತಾಬಾಯಿ ಇವರ ಜೇಷ್ಠ ಪುತ್ರನಾಗಿ ಪ್ರತಾಪಸಿಂಹ ಕುಂಭಲಗಡದಲ್ಲಿ 1540ರ ಮೇ 9 (ಜೇಷ್ಠ ಶುದ್ಧ ತೃತೀಯಾ ರವಿವಾರ ದಿ.13)ರಂದು ಜನಿಸಿ, ರಜಪೂತರ ಹೆಮ್ಮೆ ಹಾಗೂ ಆತ್ಮಗೌರವದ ಪ್ರತೀಕನಾದ.

1568ರಲ್ಲಿ ರಾಣಾ ಉದಯಸಿಂಗ ಮೇವಾಡದ ರಾಜ್ಯಭಾರ ಮಾಡುತ್ತಿದ್ದಾಗ ಒಂದು ವಿಷಮ ಪರಿಸ್ಥಿತಿಯಲ್ಲಿ ಪ್ರತಾಪಸಿಂಹ ಗೋಗುಂದಾದಲ್ಲಿ ರಾಜಮುಕಟ ಧರಿಸಿದ. `ಸ್ವಾತಂತ್ರ‍್ಯ ಸುಖ ಸ್ವರ್ಗ ಸುಖಕ್ಕಿಂತ ಮಿಗಿಲು’ ಎಂದು ಪ್ರಕಟಿಸಿದ. `ಎಲ್ಲಿಯವರೆಗೆ ಮೇವಾಡ ಪೂರ್ಣ ಸ್ವತಂತ್ರವಾಗುವುದಿಲ್ಲವೋ, ಚಿತ್ತೋಡ ವಶಪಡಿಸಿಕೊಳ್ಳುವದಿಲ್ಲವೋ ಅಲ್ಲಿಯವರೆಗೆ ರಾಜವೈಭವ ಅನುಭವಿಸುವದಿಲ್ಲ’ ಎಂದು ಪ್ರತಿಜ್ಞೆ ಮಾಡಿದ.

ವಾಸ್ತವದಲ್ಲಿ ಮಹಾರಾಣಾ ತಮ್ಮ ಮನದ ಮಾತು ಹೇಳದೇ ರಾಜ್ಯದ ಜನರ ಮನದ ಮಾತು ಹೇಳಿದ್ದರು.

ದೊರೆ ತಾನೇ ಆಹ್ವಾನಿಸಿಕೊಂಡ ಕಠಿಣ ಜೀವನ ನೋಡಿ ಪ್ರಜೆಗಳ ಮನಸ್ಸು ಕರಗಿತು. ಅರಮನೆಯಲ್ಲಿರುವ ಅರಸನಿಗಾಗಿ ಅಲ್ಲ, ತಮ್ಮಂತೆಯೇ ಜೀವಿಸುವ ನಾಯಕನಿಗಾಗಿ ಜನರು ಎಲ್ಲವನ್ನು ತ್ಯಾಗ ಮಾಡಲು ಸಿದ್ಧರಾದರು. ಕಠಿಣದಲ್ಲಿ ಕಠಿಣ ಜೀವನ ನಡೆಸಲು ಮುಂದಾದರು. ವಿಲಾಸ, ಉತ್ಸವಗಳು ನಿಂತು ಹೋದವು.

ಚಿತ್ತಾಕರ್ಷಕ ಒಡವೆ ಬದಲು ಶೋಕ ಚಿನ್ಹೆಗಳನ್ನು ಧರಿಸಲಾಯಿತು. ಮನೆ-ಮಠ ತೊರೆದು ಬೆಟ್ಟ-ಗುಡ್ಡಗಳಲ್ಲಿ ವಾಸಿಸಲು, ಸರಳ-ಸಾದಾ ಜೀವನ ನಡೆಸಲು ಜನ ಮುಂದಾದರು.

ಕಷ್ಟ-ನಷ್ಟ, ಏಳು-ಬೀಳುಗಳ ನಡುವೆಯೇ ಹೋರಾಟ ಮುಂದುವರೆಸಿದ ಪ್ರತಾಪಸಿಂಹರು ಮೇವಾಡದ ಬಹುಭಾಗವನ್ನು ನಂತರದಲ್ಲಿ ಗೆದ್ದರು. ಅದರ ಪುನರ್‌ನಿರ್ಮಾಣ ಮಾಡಿದರು. ಆದರೆ ಚಿತ್ತೋಡ ಮತ್ತು ಮಂಡಲಘಡ ಕೋಟೆಗಳನ್ನು ಗೆಲ್ಲಲಾಗಲಿಲ್ಲ. ಇದೇ ಅವರ ತೀವೃತರ ಅನಾರೋಗ್ಯಕ್ಕೆ ಕಾರಣವಾಯಿತು.

ಪುತ್ರ ಅಮರಸಿಂಗನಿಂದ ಯುದ್ಧ ಮುಂದುವರೆಸಲು, ರಾಜವೈಭವ ತೊರೆಯಲು ಮಹಾರಾಣಾರು ಪ್ರತಿಜ್ಞೆ ಮಾಡಿಸಿದರು. ತಾವೇ ನಿರ್ಮಿಸಿದ ರಾಜಧಾನಿ ಜಾವುಂಡದಲ್ಲಿ 1597 ಜನೇವರಿ 29ರಂದು ಕೊನೆಯುಸಿರೆಳದರು. ಕೇವಲ 56 ವರ್ಷ ಬಾಳಿ-ಬದುಕಿ ಜನಸಾಮಾನ್ಯರ ಹೃದಯ ಸಾಮ್ರಾಟ ಆಗಿ ಮೆರೆದ ಮಹಾರಾಣಾ ಪ್ರತಾಪಸಿಂಹರು, 30 ವರ್ಷ ದೊರೆಗಳಾಗಿದ್ದರೂ, ಸುಖ, ವೈಭವ ತ್ಯಜಿಸಿ ಕಷ್ಟಗಳನ್ನು ಬಿಗಿದಪ್ಪಿದವರು. ಸ್ವಾತಂತ್ರ‍್ಯ, ಸಂಸ್ಕೃತಿ, ಪರಂಪರೆಯ ರಕ್ಷಕರಾಗಿ ನಿಂತವರು.

ಇಂದು ಅರಸೊತ್ತಿಗೆಯ ಕಾಲ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಆದರೆ ಅವರಿಂದ ಆಯ್ಕೆಯಾದ ನಾಯಕರು ಮಾಡುತ್ತಿರುವುದೇನು? ಬಡತನ, ಸರಳ ಜೀವನ ಬಿಟ್ಟು ಪಂಚತಾರಾ ಸಂಸ್ಕೃತಿಯಲ್ಲಿದ್ದಾರೆ. ಇವರ ಬಂಗ್ಲೆಗಳು ಅರಮನೆಗಳ ವೈಭವವನ್ನು ನಾಚಿಸುತ್ತಿವೆ. ಇವರ ಆಡಂಬರದ ಜೀವನ ಜನಸಾಮಾನ್ಯರಲ್ಲಿ ಅಸೂಯೆ ಮೂಡಿಸುತ್ತಿದೆ. ಆಮಿಷಕ್ಕೆ ಒಳಗಾಗುವುದು, ಸ್ವಹಿತಕ್ಕೆ ಆದ್ಯತೆ ನೀಡುವುದು, ಮೋಸ-ವಂಚನೆ-ದ್ರೋಹ ಮಾಡಿದರೂ ಸೈ ಅಧಿಕಾರ ಬೇಕು ಎನ್ನುತ್ತಿರುವುದು, ಜೀವನ ಮೌಲ್ಯಗಳನ್ನು ಮರೆತು `ಅಹಂ’ನಿಂದ ವರ್ತಿಸುತ್ತಿರುವುದನ್ನು ನೋಡಿದಾಗ ಮಹಾರಾಣಾ ಪ್ರತಾಪಸಿಂಹರು ನೆನಪಾಗಬೇಕು. ಅವರ ಮೌಲ್ಯಗಳು ಪ್ರೇರಣೆ ನೀಡಬೇಕು. ದೇಶಭಕ್ತ, ತ್ಯಾಗಮಯಿ ಜನಾಂಗ ರೂಪಗೊಳ್ಳುವಂತಾಗಲಿ ಎಂಬ ಭಾವನೆಗೆ ಬಲ ಸಿಗಬೇಕು. ಅದಕ್ಕಾಗಿಯೇ ಪ್ರತಾಪಸಿಂಹರ ಜಯಂತಿ ಒಂದು ನೆಪ ಮಾತ್ರ.
– ಎಸ್.ಎ. ಜಮಾದಾರ.
ಶಿಕ್ಷಕರು, ಬೆಟಗೇರಿ.

ಸ್ವಾತಂತ್ರ‍್ಯ ನಂತರದಲ್ಲಿ….
* 1947ರಲ್ಲಿ ಭಾರತ ಸ್ವಾತಂತ್ರ‍್ಯ ಪಡೆದ ನಂತರ ಮಹಾರಾಣಾ ಭೂಪಾಲಸಿಂಗರು 1948 ಎಪ್ರಿಲ್ 18ರಂದು ಸ್ವತಂತ್ರ ಭಾರತದೊಂದಿಗೆ ತನ್ನ ರಾಜ್ಯವನ್ನು ವಿಲೀನ ಮಾಡಿದ ಮೊದಲ ದೊರೆ.

* ಪ್ರತಾಪಸಿಂಹ ಮತ್ತು ಚೇತಕ ಕುದುರೆಯ ಸ್ಮರಣಾರ್ಥ 1967, 1998ರಲ್ಲಿ ಅಂಚೆಚೀಟಿಗಳು ಮತ್ತು 2003ರಲ್ಲಿ ನಾಣ್ಯ ಬಿಡುಗಡೆ ಮಾಡಲಾಗಿದೆ.

* ಪ್ರತಾಪಸಿಂಹರ ಚೇತಕ ಕುದುರೆಯನ್ನೇರಿದ ಪ್ರತಿಮೆ ಸಂಸತ್ ಭವನದ ಮುಂದೆ 2007 ಅಗಸ್ಟ 21ರಂದು ಸ್ಥಾಪಿಸಲಾಗಿದೆ. ಇದರಲ್ಲಿ ಝಾಲಾ ಮಾನಸಿಂಗ, ಭಿಲ್ಲರ ರಾಜ ಭಾಮಾಸಿಂಗ, ಸೇನಾಪತಿ ಹಕೀಂ ಖಾನ ಸೂರ ಮತ್ತು ಕಾಲ್ದಳದ ಸೈನಿಕನ ಪ್ರತಿಮೆಗಳೂ ಪ್ರತಾಪಸಿಂಹರ ಪ್ರತಿಮೆ ಜೊತೆಗಿವೆ.

* ಉದಯಪುರದಲ್ಲಿ ಬೆಟ್ಟದ ಮೇಲೆ ಮಹಾರಾಣಾ ಪ್ರತಾಪರ ಭವ್ಯ ಸ್ಮಾರಕ ಮತ್ತು ಮ್ಯೂಸಿಯಂ ಸ್ಥಾಪಿಸಲಾಗಿದೆ.


Spread the love

LEAVE A REPLY

Please enter your comment!
Please enter your name here