ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಂದಿನ ಫಾಸ್ಟ್ಫುಡ್ ಯುಗದಲ್ಲಿ ಆಯುರ್ವೇದ ಔಷಧಿ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ ಶನಿವಾರ 58ನೇ ವರ್ಷದ ಅಸ್ತಮಾ ಯಜ್ಞದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ರೋಗವಿರಲಿ, ಅದಕ್ಕೆ ಮೂಲ ಕಾರಣ ನಮ್ಮ ಆಹಾರ ಪದ್ಧತಿ. ಎಲ್ಲರೂ ನಮ್ಮ ಹಿರಿಯರು ಬಳಸುತ್ತಿದ್ದ ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮಹತ್ವ ಕೊಡಬೇಕಿದೆ. ಇದೀಗ ಪ್ರತಿಯೊಂದು ಆಹಾರದಲ್ಲಿಯೂ ಕಲಬೆರಕೆ ಕಾಣುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ. ರೈತರು ಆರ್ಥಿಕ ಸಮಸ್ಯೆಯಿಂದಾಗಿ ತಾವು ಬೆಳೆದ ಬೆಳೆಯನ್ನು ಮಾರಿ ಕಲಬೆರಕೆ ಪದಾರ್ಥಗಳನ್ನು ಕೊಳ್ಳುತ್ತಿದ್ದಾರೆ. ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಪದ್ಧತಿಯಲ್ಲಿ ಔಷಧಿ ನೀಡುವದರಿಂದ ಹಲವಾರು ರೋಗಗಳನ್ನು ಗುಣಪಡಿಸಬಹುದಾಗಿದೆ ಎಂದರು.
ವೈದ್ಯ ಡಾ. ಸುಧೀಂದ್ರ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಕುಲಕರ್ಣಿ ಮಾತನಾಡಿ, ಪಟ್ಟಣದಲ್ಲಿ ಇದೊಂದು ಪರಂಪರೆಯನ್ನು ಹಾಕಿಕೊಟ್ಟಿರುವ ದಿ.ವೈದ್ಯ ಬಾಬುರಾವ ಕುಲಕರ್ಣಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ. ಇಲ್ಲಿನ ಹಾಲಮತ ಸಮಾಜ ಬಾಂಧವರ ಸೇವೆ ಸದಾ ಸ್ಮರಣೀಯವಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯರಾದ ಪಲ್ಲಣ್ಣನವರು ಕುಲಕರ್ಣಿ ವಹಿಸಿದ್ದರು. ಡಾ.ಹರೀಶ ಕುಲಕರ್ಣಿ, ಪ್ರಕಾಶ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ವ್ಹಿ.ಜಿ. ಪಡಗೇರಿ, ಎಂ.ಆರ್. ಪಾಟೀಲ ನಿಂಗಪ್ಪ ಬನ್ನಿ, ಚಂಬಣ್ಣ ಬಾಳಿಕಾಯಿ, ಗೋಪಾಲ ಪಡ್ನೀಸ್, ವ್ಹಿ.ಎಲ್. ಪೂಜಾರ, ನಿಂಗಪ್ಪ ತಹಸೀಲ್ದಾರ, ಗುರುರಾಜ ಕುಲಕರ್ಣಿ, ಅನಿಲ ಕುಲಕರ್ಣಿ, ಮಂತ್ರಾಲಯ ಪಾದಯಾತ್ರಾ ಸಂಘದ ಸದಸ್ಯರು ಸೇರಿದಂತೆ ಮುಂತಾದವರಿದ್ದರು. ಡಿ.ಎಂ. ಪೂಜಾರ ವಂದಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಜನರು ಔಷಧಿ ಪಡೆಯಲು ಆಗಮಿಸಿದ್ದರು. ಮುಂಜಾನೆ 7.11ಕ್ಕೆ ಮೃಗಶಿರಾ ಮಳೆಯ ನಕ್ಷತ್ರದ ಹಿನ್ನೆಲೆಯಲ್ಲಿ ಆಗಮಿಸಿದ್ದ ಸುಮಾರು 4-5 ಸಾವಿರ ಜನರು ಜಿಟಿ ಜಿಟಿ ಮಳೆಯ ನಡುವೆಯು ಶಾಂತರಾಗಿ ಕುಳಿತುಕೊಂಡು ಔಷಧಿ ಸೇವಿಸಿದರು.
ಕಳೆದ 58 ವರ್ಷಗಳಿಂದ ಮೃಗಶಿರಾ ಮಳೆಯ ನಕ್ಷತ್ರದ ವೇಳೆಗೆ ಅಸ್ತಮಾ ರೋಗಿಗಳಿಗೆ ಉಚಿತ ಆಯುರ್ವೇದ ಔಷಧಿ ನೀಡುವ ಮೂಲಕ ಲಕ್ಷಾಂತರ ಜನರನ್ನು ಈ ರೋಗದಿಂದ ವಾಸಿ ಮಾಡಿದ ಕೀರ್ತಿ ದಿ.ಬಾಬುರಾವ ಕುಲಕರ್ಣಿಯವರಿಗೆ ಸಲ್ಲುತ್ತದೆ. ಔಷಧಕ್ಕಾಗಿ ಇಲ್ಲಿ ಸೇರಿರುವ ಜನಸಂದಣಿಯನ್ನು ನೋಡಿದಾಗ ಆ ಔಷಧಿಯ ಮಹತ್ವ ಅರ್ಥವಾಗುತ್ತದೆ. ಇಲ್ಲಿ ಬಂದಿರುವ ಎಲ್ಲರೂ ಬೇಗ ಗುಣಮುಖರಾಗಲಿ ಎಂದು ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ಹಾರೈಸಿದರು.