ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 2023-24ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಪುರುಷರ 2ನೇ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಮುಂಡರಗಿಯ ಕೆ.ಆರ್. ಬೆಲ್ಲದ್ ಕಲಾ-ವಾಣಿಜ್ಯ ಮಹಾವಿದ್ಯಾಲಯ ತಂಡ ಜಯ ಗಳಿಸಿತು.
ರೋಣ ರಸ್ತೆಯ ಬಿಎಸ್‌ಎಸ್ ಸರ್ಕಾರಿ ಕಾಲೇಜಿನಲ್ಲಿ ನಡೆದ ಪಂದ್ಯಾವಳಿಯಲ್ಲಿ 15 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಮುಂಡರಗಿಯ ಕೆ.ಆರ್. ಬೆಲ್ಲದ್ ಕಲಾ ತಂಡ 25-16 ಅಂಕಗಳೊಂದಿಗೆ ಗೆಲುವು ಸಾಧಿಸಿತು. ಹುಬ್ಬಳ್ಳಿಯ ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ತಂಡವು ಕೆ.ಆರ್. ಬೆಲ್ಲದ್ ಕಲಾ ಕಾಲೇಜು ವಿರುದ್ಧ ಫೈನಲ್ ಪಂದ್ಯದಲ್ಲಿ ಸೋಲೊಪ್ಪಿಕೊಂಡು ರನ್ನರ್ ಅಪ್ ತಂಡವಾದರೆ, ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಮಹಾವಿದ್ಯಾಲಯ ತಂಡ ತೃತೀಯ ಸ್ಥಾನವನ್ನು ಅಲಂಕರಿಸಿತು.
ಮಹಮ್ಮದ್ ರಸುಲ್ ಸವಣೂರು ಉತ್ತಮ ಪಾಸರ್, ಯಲ್ಲಪ್ಪಗೌಡ ಎಸ್, ಉತ್ತಮ ಅಟ್ಯಾಕರ್ ಪ್ರಶಸ್ತಿ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಶಿವರಾಜ ಘೋರ್ಪಡೆ, ಶ್ರೀಧರ್ ಬಿದರಳ್ಳಿ, ಪಿ.ಎಂ. ದಿವಾಣದ, ಎಫ್.ಎಸ್. ಕರೀದುರಗನವರ ಹಾಗೂ ಪ್ರಾಚಾರ್ಯ ಮಹೇಂದ್ರ ಜಿ ವಿಜೇತ ತಂಡಗಳನ್ನು ಅಭಿನಂದಿಸಿದರು.
ಕ್ರೀಡಾ ಸಂಯೋಜನಾಧಿಕಾರಿ ಹಿತೀಶ್ ಬಿ, ಕ್ರೀಡಾ ಸಂಚಾಲಕ ಡಾ. ಎಂ.ವಾಯ್. ಜೆಟ್ಟೆಣ್ಣವರ, ದೈಹಿಕ ನಿರ್ದೇಶಕ ಲಕ್ಷ್ಮಣ್ ಹುಲ್ಲೂರ ಸೇರಿ ವಿವಿಧ ಕಾಲೇಜುಗಳ ಕ್ರೀಡಾಳುಗಳು, ದೈಹಿಕ ನಿರ್ದೇಶಕರು, ಸಿಬ್ಬಂದಿಗಳಿದ್ದರು.