ವಿಜಯಸಾಕ್ಷಿ ಸುದ್ದಿ, ಗದಗ : ಪ್ರಾಚೀನ ಕಾಲದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಇರಲಿಲ್ಲ. ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ಇದ್ದು, ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಸಾರ್ವಜನಿಕ ವಲಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಗದಗ, ಹುಬ್ಬಳ್ಳಿ, ಶಿವಮೊಗ್ಗ ಜೈನ ಸಮುದಾಯದ ಮಹಿಳೆಯರು ಸ್ಟಾಲ್‌ಗಳನ್ನು ತೆರೆಯುವ ಮೂಲಕ ಸ್ವಾವಲಂಬಿ ಮತ್ತು ಆರ್ಥಿಕವಾಗಿ ಶಕ್ತರಾಗಬೇಕು ಎಂಬ ಸಂದೇಶವನ್ನು ಮಹಿಳಾ ಸಮುದಾಯಕ್ಕೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದರು.
ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ ಹುಬ್ಬಳ್ಳಿ, ಗದಗ, ಬಾಗಲಕೋಟ, ಶಿವಮೊಗ್ಗ, ಮಹಿಳಾ ಸಂಘಟನೆಯ ವತಿಯಿಂದ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಮಾಡುವ ಕುರಿತು ಹಮ್ಮಿಕೊಂಡಿದ್ದ `ಉಡಾನ್ ಟ್ರೇಡ್ ಫೇರ್’ ಕಾರ್ಯಕ್ರಮವನ್ನು ನಗರದ ಶ್ರೀ ವಿಠ್ಠಲರೂಢ ಸಮುದಾಯ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಜೈನ ಸಮಾಜದ ಸಾಧಕರನ್ನು ಹಾಗೂ ಗದಗ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಪ್ರದರ್ಶನದಲ್ಲಿ ಜೈನ ಮಹಿಳೆಯರು ಸ್ವತಃ ತಯಾರಿಸಿದ ಎಲ್ಲಾ ತರಹದ ವಸ್ತುಗಳ, ಆಹಾರ ಪದಾರ್ಥಗಳ ಅಂಗಡಿಗಳ ಪ್ರದರ್ಶನದಲ್ಲಿ ಸೀರೆಗಳು, ಪಾಶ್ಚಿಮಾತ್ಯ ಕಲೆಕ್ಷನ್, ಮನೆಯ ಅಲಂಕಾರ ವಸ್ತುಗಳು, ಬೇಕರಿ ಆಹಾರಗಳು ಸೇರಿದಂತೆ 35 ಅಂಗಡಿಗಳು ಪ್ರದರ್ಶನಗೊಂಡವು. ಟೂರ್ಸ್ & ಟ್ರಾವೆಲ್ಸ್ ಮಾಹಿತಿ ಕೇಂದ್ರದ ಮೂಲಕ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇಂದಿರಾ ಬಾಗಮಾರ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ಚೌಧರಿ, ರೂಪಚಂದ ಪಾಲರೇಚಾ, ಪಂಕಜ ಬಾಫಣ, ಮನೀಶ ಬನ್ಸಾಲಿ, ಸುರೇಶ ಓಸ್ವಾಲ್, ಯೇಸ್ಮಾ ಜೈನ್, ಅನಿಲ ಜೈನ, ಇಂದಿರಾ ಬಾಗಮಾರ, ಸುರೇಶ ಕೊಠಾರಿ, ಅರಿಹಂತ ಟ್ರೇಡರ್ಸ, ಸ್ವೀಟಿ ಬನ್ಸಾಲಿ ಸೇರಿದಂತೆ ಜೈನ್ ಸಮಾಜದ ಮಹಿಳೆಯರು, ಹಿರಿಯರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.
ಜೈನ ಸಮಾಜದ ಮಹಿಳೆಯರ ಈ ಕಾರ್ಯ ವೈಖರಿ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದೆ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬ ಮಾತನ್ನು ಜೈನ ಸಮುದಾಯದ ಮಹಿಳೆಯರು ಸಾಬೀತು ಪಡಿಸಿದ್ದಾರೆ. ಮಹಿಳೆಯರು ಹೆಚ್ಚು ಹೆಚ್ಚು ಗುಣಾತ್ಮಕ ಕೆಲಸಗಳಲ್ಲಿ ತೊಡಗಿ ಇತರ ಮಹಿಳೆಯರಿಗೆ ಸ್ಪೂರ್ತಿ ತುಂಬಬೇಕೆಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.