ವಿಜಯಸಾಕ್ಷಿ ಸುದ್ದಿ, ಧಾರವಾಡ : ನಿತ್ಯ ಮಾಡುವ ಯೋಗ ಅನೇಕ ರೋಗಗಳ ಪರಿಹಾರಕ್ಕೆ ಉತ್ತಮ ಮಾರ್ಗವಾಗಿದೆ. ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿಕೊಳ್ಳುವದರಿಂದ ಸದೃಡ ದೇಹ ಮತ್ತು ಆರೋಗ್ಯವಂತ ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಆಯುಷ್ ಇಲಾಖೆ ಯೋಗದ ಜನಪ್ರಿಯತೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಸಿದ್ಧತಾ ಸಭೆ ಜರುಗಿಸಿ ಮಾತನಾಡಿದರು.
ಆಯುಷ್ ಇಲಾಖೆ ಮೂಲಕ ಈ ಕಾರ್ಯಕ್ರಮ ಸಂಘಟಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ಸಭಾಪತಿಗಳು ಸೇರಿದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಯೋಗಪಟುಗಳಿಗೆ, ಸಾರ್ವಜನಿಕರಿಗೆ ಕೆಎಂಎಫ್‌ನಿಂದ ಹಾಲು ವಿತರಿಸಲಾಗುತ್ತದೆ. ಕಾರ್ಯಕ್ರಮದ ಯಶಸ್ವಿ ಸಂಘಟಣೆಗೆ ವಿವಿಧ ಇಲಾಖೆಗಳಿಗೆ ಕಾರ್ಯ ಹಂಚಿಕೆ ಮಾಡಲಾಗಿದ್ದು, ಪ್ರತಿ ಇಲಾಖೆ ಅಧಿಕಾರಿಗಳು ಉತ್ತಮವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಗಣೇಶ ಕಬಾಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಕೆ.ಪಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಯುಷ್ ವೈದ್ಯರು, ಆಯುರ್ವೇದ ಮಹಾವಿದ್ಯಾಲಯ ಪ್ರತಿನಿಧಿಗಳು, ಯೋಗ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರತಿ ವರ್ಷದಂತೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತದೆ. ಅಂದು ಬೆಳಿಗ್ಗೆ 6.45ಕ್ಕೆ ಉದ್ಘಾಟನೆ, ಬೆಳಿಗ್ಗೆ 7ರಿಂದ 8 ಗಂಟೆವರೆಗೆ ಯೋಗ ಪ್ರದರ್ಶನ ಇರುತ್ತದೆ. ಇದರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಯೋಗ ಹಾಗೂ ಇತರ ಸಂಘ-ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.