ವಿಜಯಸಾಕ್ಷಿ ಸುದ್ದಿ, ಗದಗ : ಕಪ್ಪತ್ತಗಿರಿ ಫೌಂಡೇಶನ್ ಗದಗ, ಕಪ್ಪತ್ತಗಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆಯ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಕಪ್ಪತಗುಡ್ಡದಲ್ಲಿರುವ ಕಪ್ಪತ್ತಮಲೇಶ್ವರ ದೈವಿ ವನದಲ್ಲಿ ಪರಿಸರೋತ್ಸವ ಕಾರ್ಯಕ್ರಮ ಜರಗಿತು.
ಡಾ. ವೆಂಕಟೇಶ್ ರಾಠೋಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾತಾವರಣ ಮತ್ತು ಮನುಷ್ಯನ ಸ್ಥಿತಿ ಆರೋಗ್ಯ ಕೆಟ್ಟ ಮೇಲೆ ಜನರು ವೈದ್ಯರ ಹತ್ತಿರ ಬರುತ್ತಾರೆ. ಆರೋಗ್ಯ ಹದಗೆಡುವ ಮುನ್ನವೇ ನಮ್ಮ ಪರಿಸರವನ್ನು ಚೆನ್ನಾಗಿ ಇಟ್ಟುಕೊಂಡರೆ ನಮ್ಮ ಆರೋಗ್ಯ ಕೂಡ ಸರಿಯಾಗಿ ಇರುತ್ತದೆ. ಪರಿಸರ ಮಾನವನಿಗೆ ಒಂದು ಆರೋಗ್ಯ ಕೊಂಡಿ ಇದನ್ನು ಕಳಚದಂತೆ ನೋಡಿಕೊಳ್ಳೋಣ ಎಂದರು.
ಎಸ್.ಕೆ. ಆಡಿನ ಮಾತನಾಡಿ, ಕಪ್ಪತ್ತಗಿರಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿ, ಸಂಸ್ಥಾಪಕ ಅಧ್ಯಕ್ಷರ ಆಸೆಯಂತೆ ಪರಿಸರ ದಿನಾಚರಣೆ ಕಾರ್ಯಕ್ರಮ ಪ್ರತಿ ವರ್ಷ ಕಪ್ಪತ್ತಗಿರಿಯಲ್ಲಿ ನಡೆಯುತ್ತಿದ್ದು, ವೇದಿಕೆಯ ಮುಖಾಂತರ ಮಾಡಿದ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ತಿಳಿಸಿದರು.
ಪ್ರಿಯಾಂಕ ನಡುವಿನಮನಿ ಮಾತನಾಡಿ, ನಗರದ ಅಭಿವೃದ್ಧಿಯ ನೆಪದಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಪರಿಸರದ ಹಸಿರು ಕಡಿಮೆಯಾದರೆ ನಮ್ಮ ಆಯಸ್ಸು ಕೂಡ ಕಡಿಮೆಯಾಗುತ್ತದೆ.
ನಾವೆಲ್ಲರೂ ಪರಿಸರ ಉಳಿಸುವ ಜವಾಬ್ದಾರಿ ವಹಿಸೋಣ ಎಂದರು.
ಅರುಣಾ ನರೇಂದ್ರ, ಪಂಚಯ್ಯ ಹಿರೇಮಠ, ಐ.ಕೆ. ಕಮ್ಮಾರ, ಅಧ್ಯಕ್ಷತೆ ವಹಿಸಿದ್ದ ಚಂದ್ರಕಲಾ ಇಟಗಿಮಠ ಮಾತನಾಡಿದರು. ಬೆಂಗಳೂರಿನ ಸಾಹಿತ್ಯ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವ್ಹಿ.ಹರೀಶಕುಮಾರ ಹಾಗೂ ಪಿಪಿಜಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಸವರಾಜ ಗಾಣಿಗೇರರನ್ನು ಸನ್ಮಾನಿಸಲಾಯಿತು.
ವಿಮರ್ಶಕ ಯಲ್ಲಪ್ಪ ಹರ್ನಾಳಗಿ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಮರುಳು ಸಿದ್ದಪ್ಪ ದೊಡ್ಡಮನಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಸೌಮ್ಯ ಹಿರೇಮಠ ಪ್ರಾರ್ಥಿಸಿದರು. ನೀಲಮ್ಮ ಅಂಗಡಿ ಸ್ವಾಗತಿಸಿದರು. ಮಹಾಂತೇಶ ಅಣ್ಣಿಗೇರಿ ನಿರೂಪಿಸಿದರೆ, ತೋಟಯ್ಯ ಗುಡ್ಡಿಮಠ ವಂದಿಸಿದರು.