ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜನರಲ್ ಕಾರ್ಯಪ್ಪ ಸರ್ಕಲ್ ಹತ್ತಿರ ಹೊಸಪೇಟೆಯ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ನ 16ನೇ ಶಾಖೆಯನ್ನು ಜೂನ್ 13ರ ಬೆಳಿಗ್ಗೆ 10.15ಕ್ಕೆ ಆರಂಭಿಸಲಾಗುತ್ತಿದೆ ಎಂದು ಬ್ಯಾಂಕ್ನ ಅಧ್ಯಕ್ಷ ವಿಶ್ವನಾಥ ಹಿರೇಮಠ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಮುನವಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 1979ರಲ್ಲಿ ವಿಕಾಸ ಯುವಕ ಮಂಡಳ ಎಂಬ ಸಮಾಜಮುಖಿ ಸಂಘಟನೆ ಮೂಲಕ ಪ್ರಾರಂಭವಾದ ಸಾಮಾಜಿಕ ಕಾರ್ಯಚಟವಟಿಕೆಗಳು 1997ರಲ್ಲಿ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಸ್ಥಾಪನೆಗೆ ಕಾರಣವಾಯಿತು ಎಂದರು.
ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಅಂದಿನಿಂದ ವರ್ಷದ 365 ದಿನವೂ ರಜೆ ರಹಿತ ಹಾಗೂ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಗ್ರಾಹಕರಿಗೆ ನಿರಂತರ ಸೇವೆ ನೀಡುತ್ತಿದೆ. ಲಾಕರ್ ಸೌಲಭ್ಯ, ಸಾಲ ಸೌಲಭ್ಯ ಸೇರಿದಂತೆ ಎಲ್ಲ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ ಎಂದು ವಿವರಿಸಿದರು.
ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ.ನಲ್ಲಿ 811 ಕೋಟಿ ರೂ ಠೇವಣಿ, 544 ಕೋಟಿ ರೂ ಸಾಲ ಸೇರಿ 1,355 ಕೋಟಿ ರೂ. ಒಟ್ಟು ವ್ಯವಹಾರವಿದ್ದು, ಶೇ. 4.17ರಷ್ಟು ಅನುತ್ಪಾದಕ ಆಸ್ತಿ, ಶೇ. 0.75ರಷ್ಟು ನಿವ್ವಳ ಅನುತ್ಪಾದಕ ಆಸ್ತಿ ಹಾಗೂ 76 ಕೋಟಿ ರೂ. ಸ್ವಂತ ಬಂಡವಾಳವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಅಮೃತ ಜೋಶಿ, ಎಂ. ವೆಂಕಪ್ಪ, ಮಾಜಿ ನಿರ್ದೇಶಕ ಸತ್ಯನಾರಾಯಣರಾವ್, ಕೇಮದ್ರ ಕಚೇರಿ ವ್ಯವವಸ್ಥಾಪಕಿ ಅಶ್ವಿನಿ ದೇಸಾಯಿ, ಗದಗ ಶಾಖಾ ವ್ಯವಸ್ಥಾಪಕ ಗಣೇಶ ಪಾಟೀಲ ಮುಂತಾದವರಿದ್ದರು.