ಮನೆಗಳು ಯೋಗ ಜಿಮ್ ಆಗಬೇಕು : ಪ್ರೇಮಾ ಮೇಟಿ

0
Inauguration of Free Gym Training Camp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅನೇಕ ಮಹಿಳೆಯರು ತಾವು ದೈಹಿಕವಾಗಿ ಸದೃಢರಾಗಿರಲು, ತೂಕ ಇಳಿಸಲು ಜಿಮ್ ಹಾಗೂ ಫಿಟ್‌ನೆಸ್ ಸೆಂಟರ್‌ಗಳಿಗೆ ಹೋಗುತ್ತಾರೆ. ಆದರೆ ಇದು ಎಲ್ಲ ಮಹಿಳೆರಿಗೆ ಸಾಧ್ಯವಾಗುವುದಿಲ್ಲ.

Advertisement

ಅದಕ್ಕಾಗಿ ಮಹಿಳೆಯರು ತಮ್ಮ ಮನೆಯಲ್ಲಿರುವ ಖುರ್ಚಿ, ಸೋಫಾ, ಕಾಟಾ, ತಲೆದಿಂಬು, ಕಿಟಕಿ ಸಳಿ ಇವುಗಳ ಸಹಾಯದಿಂದ ಯೋಗ ವ್ಯಾಯಾಮ, ಯೋಗಾಸನಗಳನ್ನು ಮಾಡಲು ಸಾಧ್ಯ. ಹೀಗೆ ಮಾಡಲು ಮೊದಲು ಮಹಿಳೆಯರು ಮನಸ್ಸು ಮಾಡಬೇಕು. ಅಂಥ ಮನಸ್ಸು ಪಡೆಯಲು ಯೋಗ ಸಹಕಾರಿಯಾಗಿದೆ ಎಂದು ಅಖಿಲ ಕರ್ನಾಟಕ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಟ್ರಸ್ಟ್ ಗದಗ ಸಂಸ್ಥೆಯ ಅಧ್ಯಕ್ಷೆ ಪ್ರೇಮಾ ಮೇಟಿ ಅಭಿಪ್ರಾಯಪಟ್ಟರು.

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಗದಗ ಜಿಲ್ಲಾ ಯೋಗ ಒಕ್ಕೂಟ ಹಾಗೂ ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಗದಗ ಇವರುಗಳ ಸಹಯೋಗದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ-24 ಕಾರ್ಯಕ್ರಮಗಳ ಅಂಗವಾಗಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸವೇಶ್ವರ ಹೈಸ್ಕೂಲ್ ಆವರಣ)ದಲ್ಲಿ ಜರುಗಿದ ಮಹಿಳೆಯರಿಗಾಗಿ ಉಚಿತ ಯೋಗ ಜಿಮ್ ತರಬೇತಿ ಶಿಬಿರ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಬಿರ ಶಿಕ್ಷಕಿ ಸುನಂದಾ ಜ್ಯಾನೋಪಂತರ ಮಾತನಾಡಿ, ಇತ್ತೀಚಿಗೆ ಮಹಿಳೆಯರಲ್ಲಿ ಮಂಡಿನೋವು, ನಡನೋವು, ತಲೆನೋವು, ಮುಟ್ಟಿನ ದೋಷಗಳು ಹೆಚ್ಚು ಕಾಡುತ್ತಲಿವೆ. ಈ ಎಲ್ಲ ನೋವು ನಿವಾರಣೆಗಾಗಿ ಆಸನ, ಪ್ರಾಣಾಯಾಮ, ಧ್ಯಾನಗಳಿವೆ. ಇವುಗಳನ್ನು ಮಾಡಲು ಸಾಧ್ಯವಾಗದವರು ಯೋಗ ಸಾಮಗ್ರಿ-ಸಲಕರಣೆಗಳ ಮೂಲಕ ಮಾಡಲು ತಿಳಿಸುವುದೇ ಯೋಗ ಜಿಮ್ ತರಬೇತಿ ಶಿಬಿರದ ಉದ್ದೇಶವಾಗಿದೆ ಎಂದರು.

ಗೌರಿ ಜಿರಂಕಳಿ ಮತ್ತು ಸಂಗಡಿಗರು ಪ್ರಾರ್ಥನೆ ಹೇಳಿದರು. ಶಾಂತಾ ಮುಂದಿನಮನಿ ಪರಿಚಯಿಸಿ ಸ್ವಾಗತ ಕೋರಿದರು. ಶಿಬಿರದ ಮಾರ್ಗದರ್ಶಕ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿದರು. ವಿಜಯಾ ಚನ್ನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅರುಣಾ ಇಂಗಳಳ್ಳಿ ವಂದಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಅಧ್ಯಕ್ಷೆ ರಜನಿ ಪಾಟೀಲ ಮಾತನಾಡಿ, ಮಹಿಳೆಯರು ದಿನನಿತ್ಯ ತಮ್ಮ ಮನೆಯಲ್ಲಿ ಮಾಡುವ ಕೆಲಸ ಕಾರ್ಯಗಳಲ್ಲಿಯೇ ಯೋಗ ಕ್ರಿಯೆಗಳು ಒಳಗೊಂಡಿವೆ. ಇವೆಲ್ಲವೂ ಆರೋಗ್ಯ ಗುಣಾಂಶಗಳನ್ನು ಹೊಂದಿವೆ. ಆದ್ದರಿಂದ ಮಹಿಳೆಯರು ಸೋಮಾರಿತನ ತೊರೆದು ತಮ್ಮ ತಮ್ಮ ಮನೆಗೆಲಸಗಳನ್ನು ತಾವೇ ನಿಭಾಯಿಸಿದರೆ ಆರೋಗ್ಯವಂತರಾಗುವಿರಿ ಎಂದರು.


Spread the love

LEAVE A REPLY

Please enter your comment!
Please enter your name here