ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ನಾಟಕ ಕಂಪನಿಯಿಂದ ಜೂನ್ 20ರಿಂದ `ಗಂಗಿ ಮನ್ಯಾಗ ಗೌರಿ ಹೊಲದಾಗ’ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನ ಆರಂಭವಾಗಲಿದ್ದು, ನಾಟಕ ಪ್ರಾರಂಭೋತ್ಸವದ ದಿವ್ಯ ಸಾನ್ನಿಧ್ಯವನ್ನು ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪ. ಪೂ.ಕಲ್ಲಯ್ಯಜ್ಜನವರು ವಹಿಸಿಕೋಳ್ಳಲಿದ್ದಾರೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಖ್ಯಾತ ಕವಿಗಳು ಹಾಗೂ ನಾಟಕ ಬರಹಗಾರ ರಾಜಣ್ಣ ಜೇವರ್ಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ರಂಗಭೂಮಿ ತೊಂದರೆ ಅನುಭವಿಸುತ್ತಿದೆ. ಟಿವಿ, ಮೊಬೈಲ್ ಹಾವಳಿಯಿಂದ ಬಹಳ ಹೊಡೆತ ಬಿದ್ದಿದೆ.
ಆದರೂ, ನಾಟಕಗಳ ಪರಂಪರೆ 180 ವರ್ಷಗಳಿಂದ ಇದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ನಾಟಕಗಳು ನಡೆದುಕೊಂಡು ಹೋಗುತ್ತಿವೆ. ಕರ್ನಾಟಕದಲ್ಲಿ 24 ವೃತ್ತಿ ನಾಟಕ ಕಂಪನಿಗಳಿವೆ. ಅದರಲ್ಲಿ 8-10 ನಿರಂತರವಾಗಿ ಪ್ರದರ್ಶನಗೊಳ್ಳುತ್ತಿದ್ದು, ಇನ್ನುಳಿದ ಕಂಪನಿಗಳು ಅರೆಕಾಲಿಕವಾಗಿ ನಡೆಯುತ್ತಿವೆ ಎಂದರು.
ಸರ್ಕಾರ ನೀಡುವ ಅನುದಾನದಿಂದ ನಾಟಕ ಕಂಪನಿಗಳು ಇನ್ನೂ ಜೀವಂತವಾಗಿವೆ. ಅನುದಾನ ಇಲ್ಲದಿದ್ದರೆ ಕೇವಲ ಬೆರಳೆಣಿಕೆಯಷ್ಟು ನಾಟಕ ಕಂಪನಿಗಳು ಉಳಿಯುತ್ತಿದ್ದವು. ಯುವಕರು ಕಲೆಯ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ವೃತ್ತಿ ರಂಗಾಯಣವನ್ನು ನಾವು ಕೇಳುತ್ತಿದ್ದೇವೆ. ಮೈಸೂರಿನಲ್ಲಿ ರಂಗಾಯಾಣ ಇದೆ. ಇದರಿಂದ ಪ್ರತಿ ವರ್ಷ 20 ಕಲಾವಿದರು ಹೊರಬರುತ್ತಿದ್ದಾರೆ. ದಾವಣಗೆರೆಯಲ್ಲಿ ರಂಗಾಯಣ ಇದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಗದಗ ನಗರದಲ್ಲಿ ಮೊದಲು ಮೂರು ನಾಟಕ ಕಂಪನಿಗಳು ಏಕಕಾಲಕ್ಕೆ ನಡೆಯುತ್ತಿದ್ದವು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಪುಟ್ಟರಾಜ ಕಲಾ ಪೋಷಕ ಸಂಘ ಕಲೆಯನ್ನು ಬೆಳೆಸಿ-ಉಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ. ನಗರಕ್ಕೆ ಯಾವುದೇ ನಾಟಕ ಕಂಪನಿ ಬಂದರೂ ಅವರಿಗೆ ತನು-ಮನ-ಧನದಿಂದ ಸಹಾಯ ಸಹಕಾರ ಮಾಡುತ್ತಾ ಬಂದಿದ್ದಾರೆ ಎಂದು ಸ್ಮರಿಸಿದರು.
ಪುಟ್ಟರಾಜ ಕಲಾ ಪೋಷಕ ಸಂಘದ ಅಧ್ಯಕ್ಷ ಎಫ್.ವ್ಹಿ. ಮರಿಗೌಡ್ರ ಮಾತನಾಡಿ, ಜೇವರ್ಗಿ ಕುಟುಂಬದವರೆಲ್ಲರೂ ಕಲಾವಿದರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾಟಕ ರಂಗ ನಶಿಸಿಹೋಗುತ್ತಿದೆ.
ಮುಂಬುರುವ ದಿನಗಳಲ್ಲಿ ನಾಟಕ ಕಂಪನಿಗಳು ಉಳಿಯಬೇಕು ಎನ್ನುವುದು ನಮ್ಮ ಉದ್ದೇಶ. ಎಲ್ಲರೂ ನಾಟಕ ವೀಕ್ಷಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯವಿದೆ ಎಂದ ಅವರು, ನಗರದ ಹೃದಯ ಭಾಗದಲ್ಲಿ ಕಲಾ ಮಂದಿರ ಸ್ಥಾಪನೆಗೆ ಸರಕಾರದಿಂದ ಸ್ಥಳ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಗಮೇಶ್ ಬಿಳಗಿ, ಬಸವರಾಜ ಕರಮುಡಿ, ಪ್ರಭಯ್ಯ ಹಿರೇಮಠ, ಸಿದ್ದಣ್ಣ, ಅಂಬರೀಶ್ ನಾಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ನಾಟಕವು ಪ್ರತಿದಿನ 2 ಪ್ರದರ್ಶನ ನೀಡುತ್ತಿದ್ದು, ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 6-15ಕ್ಕೆ ಪ್ರದರ್ಶನಗೊಳ್ಳಲಿದೆ. ನಗರದ ಭೂಮರಡ್ಡಿ ಆವರಣದ ಶ್ರೀ ತೋಂಟದಾರ್ಯ ಮಠದ ಜಾಗದಲ್ಲಿ ನಾಟಕ ನಡೆಯಲಿದೆ. ನಾಟಕ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಹೆಚ್.ಎಸ್. ಪಟ್ಟಣಶೆಟ್ಟರ, ಬಿ.ಬಿ. ಅಸೂಟಿ, ಶಾಂತಣ್ಣ ಮುಳವಾಡ, ನಜೀರ್ ಮಜ್ಜಿಗಿ, ಎಂ.ಎಂ. ಹಿರೇಮಠ, ಫೀರಸಾಬ್ ಕೌತಾಳ, ಡಾ. ಹನುಮಂತಗೌಡ್ರ ಕಲ್ಮನಿ, ಪ್ರಕಾಶ್ ಕರಿ, ವಿ.ಕೆ ಗುರುಮಠ, ಎಸ್.ವಿ ಅಕ್ಕಿ, ಆನಂದ ಬಿಂಗಿ, ರಾಮಕೃಷ್ಣ ಪಾಂಡ್ರೆ, ನಾಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಎಫ್.ವ್ಹಿ. ಮರಿಗೌಡ್ರ ಮಾಹಿತಿ ನೀಡಿದರು.



