ವಿಜಯಸಾಕ್ಷಿ ಸುದ್ದಿ, ಗದಗ : ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವ ಇದೇ ಜೂನ್ 22ರಿಂದ 26ರವರೆಗೆ ಜರುಗಲಿದೆ. ಜೂನ್ 26ರಂದು ಉಭಯ ಗುರುಗಳ ಮಹಾರಥೋತ್ಸವ, ಧರ್ಮೋತ್ತೇಜಕ ಮಹಾಸಭೆ ಹಾಗೂ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಪರಮಪೂಜ್ಯ ಗಾನಯೋಗಿ ಶಿವಯೋಗಿ ಪಂ. ಪಂಚಾಕ್ಷರ ಗವಾಯಿಗಳವರ 80ನೇ ಸ್ವರ ಸಮಾರಾಧನೆ ಹಾಗೂ ಪದ್ಮಭೂಷಣ ಡಾ.ಪಂ. ಪುಟ್ಟರಾಜ ಕವಿಗವಾಯಿಗಳವರ 14ನೇ ಪುಣ್ಯರಾಧನೆ ಅಂಗವಾಗಿ ಇದೇ ಜೂನ್ 22 ರಿಂದ 26ರ ವರೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಗದುಗಿನ ಶ್ರೀ ಕುಮಾರೇಶ್ವರ ವೈದಿಕ ಪಾಠಶಾಲೆಯವರಿಂದ ಹಾಗೂ ಆಶ್ರಮದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ನಂತರ ಪ್ರತಿದಿನ ಬೆಳಿಗ್ಗೆ 7ರಿಂದ 8 ಗಂಟೆವರೆಗೆ ಕೈವಲ್ಯ ಪದ್ಧತಿ ಶಿವಯೋಗ ಕುರಿತು ಶಿವಾನುಭವವನ್ನು ರನ್ನಬೆಳಗಲಿ ಶಂಭುಲಿಂಗಾಶ್ರಮ ಸಿದ್ದಾರೂಢ ಮಠದ ಪೂಜ್ಯಶ್ರೀ ಕೃಷ್ಣೇಗೌಡ ಕೋಲೂರ ಅವರಿಂದ ಜರುಗಲಿದೆ. ಮೇ. 26ರಿಂದ ಜೂನ್ 26ರವರೆಗೆ ಪ್ರತಿದಿನ ಸಾಯಂಕಾಲ 6 ಗಂಟೆಗೆ ಪಂ. ಸದಾಶಿವಶಾಸ್ತ್ರೀಗಳು ಹುಕ್ಕೇರಿ ವಿರಚಿತ ಪಂ. ಪಂಚಾಕ್ಷರೇಶ್ವರ ಮಹಾಪುರಾಣ ಪ್ರವಚನ ಜರಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಗದ್ಗುರು ಮಹಾಸನ್ನಿಧಿಯವರಿಂದ ಪದ್ಮಭೂಷಣ ಡಾ. ಪಂ.ಪುಟ್ಟರಾಜ ಅವರ ಕವಿಕೃತ `ಶ್ರೀ ಮಹಾದೇವಿ ಪುರಾಣಂ’ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಪೂಜ್ಯಶ್ರೀ ಕಲ್ಲಯ್ಯಜ್ಜನವರ ಸಾಹಿತ್ಯ ಹೊಂದಿರುವ `ಶಿವಯೋಗಿ ಸಂತ ಪುಟ್ಟಯ್ಯಜ್ಜ’ ಧ್ವನಿ ಸುರುಳಿ ಬಿಡುಗಡೆಗೊಳ್ಳಲಿದೆ. ರಾತ್ರಿ 10.30 ಗಂಟೆಗೆ ಗಾನ ಶಿವಯೋಗಿ ತ್ರಿಭಾಷಾ ಚಕ್ರವರ್ತಿ ಪದ್ಮಭೂಷಣ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ ವಿರಚಿತ `ಶ್ರೀ ಕೃಷ್ಣ ಗಾರುಡಿ’ ಪೌರಾಣಿಕ ನಾಟಕವನ್ನು ವಿರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ ಎಂದು ಹೇಮರಾಜ ಶಾಸ್ತ್ರೀ ಹೆಡಿಗ್ಗೊಂಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಲಿಂಗಶಾಸ್ತ್ರೀಗಳು ಸಿದ್ದಾಪೂರ, ವಿರೇಶ ಕಿತ್ತೂರ, ಸಿದ್ದೇಶ್ವರಶಾಸ್ತ್ರೀಗಳು ತೆಲ್ಲೂರು, ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರೀಗಳು ಬೇವೂರ, ಸದಾನಂದ ಶಾಸ್ತ್ರೀಗಳು ಹರ್ಲಾಪೂರ, ವಿರೇಶ್ವರ ಪುಣ್ಯಾಶ್ರಮದ ಸೋಲ್‌ಟ್ರಸ್ಟನ ಅಧ್ಯಕ್ಷರಾದ ಎನ್.ಎಸ್. ಕೆಂಗಾರ, ಉಪಾಧ್ಯಕ್ಷ ಪ್ರಕಾಶ ಬಸರಿಗಿಡದ, ಪದಾಧಿಕಾರಿಗಳಾದ ವಸಂತಗೌಡ ಪೊಲೀಸಪಾಟೀಲ, ಪರಶುರಾಮ ಕಟ್ಟಿಮನಿ, ಸಂಗಮೇಶ ದುಂದೂರ, ಪಿ.ಸಿ. ಹಿರೇಮಠ, ಎಂ.ಆರ್. ಹಿರೇಮಠ, ಚನ್ನಬಸಯ್ಯ ಬಂಕಾಪೂರಮಠ ಮುಂತಾದವರು ಉಪಸ್ಥಿತರಿದ್ದರು.
ವಿರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಹೇಮರಾಜ ಶಾಸ್ತ್ರೀ ಹೆಡಿಗ್ಗೊಂಡ ಮಾತನಾಡಿ, ಜೂನ್ 22ರಂದು ಸಂಜೆ 6 ಗಂಟೆಗೆ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನದ ಸಾನಿಧ್ಯವನ್ನು ಶ್ರೀ ಕಾಶಿ ಪೀಠದ ಪೂಜ್ಯಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗತ್ಪಾದಗಳವರು ವಹಿಸುವರು. ಅಧ್ಯಕ್ಷತೆಯನ್ನು ಸೂಡಿ ಜುಕ್ತ್ತಿರೇಮಠದ ಪೂಜ್ಯಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು.
ಚಳಗೇರಿ ಹಿರೇಮಠದ ಪೂಜ್ಯಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸುವವರು. ಜಗದ್ಗುರು ಮಹಾಸನ್ನದಿಯವರಿಂದ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು ರಚಿಸಿದ `ಶ್ರೀ ಗುರುವಚನ ಪ್ರಭ’ ಗ್ರಂಥ ಲೋಕಾರ್ಪಣೆಗೊಳ್ಳುವುದು. ಇದಕ್ಕೂ ಮುನ್ನ ಬೆಳಿಗ್ಗೆ 11 ಗಂಟೆಗೆ ಪೂಜ್ಯರಿಂದ ಶ್ರೀಗುರು ರಕ್ಷೆ ಜರುಗಲಿದೆ.