ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಉದ್ದೇಶಕ್ಕಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಗ್ಯಾರಂಟಿ ಕೊಟ್ಟಿದ್ದು ಚುನಾವಣೆಗೆ ಮಾತ್ರ ಅಲ್ಲ. ಗ್ಯಾರಂಟಿ ನಿಲ್ಲಿಸಬೇಕು ಎನ್ನುವ ಹುನ್ನಾರ ಬಿಜೆಪಿ ನಡೆಸಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಜನರ ದಿಕ್ಕು ತಪ್ಪಿಸುವ ಮೂಲಕ ರಾಜ್ಯ ಸರಕಾರ ಜನ ವಿರೋಧಿ ಸರಕಾರ ಎಂದು ಬಿಂಬಿಸಲು ಹೋರಟಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ತೈಲ ಬೆಲೆ ಏರಿಕೆ ಆದಾಗ ಪ್ರಶ್ನಿಸದ ಅವರು ಈಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.45.5ರಷ್ಟು ಮತಗಳು ಬಂದಿವೆ. ಕನಿಷ್ಠ 13-14 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿತ್ತು. ಆದರೆ 9 ಸ್ಥಾನಗಳಲ್ಲಿ ಗೆಲುವು ಸಾಧ್ಯವಾಗಿದೆ. 3-4 ಸ್ಥಾನಗಳಲ್ಲಿ ಕಡಿಮೆ ಅಂತರದಲ್ಲಿ ಸೋಲಾಗಿದೆ. ಸೋಲಿಗೆ ಕಾರಣ ಏನು ಎಂಬುದರ ಕುರಿತು ಕೆಪಿಸಿಸಿ ವತಿಯಿಂದ 28 ಕ್ಷೇತ್ರಗಳ ಕುರಿತು ಪರಾಮರ್ಶೆ ಮಾಡಲಾಗುವುದು. ಕಳೆದ ಲೋಸಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.37ರಷ್ಟು ಮತ ಬಂದಿತ್ತು. ಆದರೆ ಬಾರಿ ಶೇ.45.5ರಷ್ಟು ಮತ ನೀಡಿದ್ದು, ಎಲ್ಲ ಮತಬಾಂಧವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ ಮುಂಬರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ತಾ.ಪಂ, ಜಿ.ಪಂ ಚುನಾವಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.
ಚನ್ನಪಟ್ಟಣ, ಬಳ್ಳಾರಿ ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಪಟ್ಟಂತರ ಪಕ್ಷದ ಸಂಘಟನೆ, ಬೂತ್ ಕಮಿಟಿ ಕುರಿತು ಚರ್ಚೆ ನಡೆಯುತ್ತಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ ಎಂದರು.
ದೇಶ ವಿರೋಧಿ ಹೇಳಿಕೆಗಳು ಹಾಗೂ ಘೋಷಣೆಗಳನ್ನು ಕೂಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆ ರೀತಿ ಯಾರೂ ಹೇಳಿಕೆಗಳನ್ನು, ಘೋಷಣೆಯನ್ನು ಕೂಗಬಾರದು. ದರ್ಶನ ಹಿರೋ ಇರಲಿ, ಜೀರೋ ಇರಲಿ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ. ಸರಕಾರ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದು, ತನಿಖೆ ಆಧರಿಸಿ ಶಿಕ್ಷೆ ಆಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಮುಖಂಡರಾದ ಕೆ.ಎಂ. ಸಯ್ಯದ, ಹುಮಾಯುನ್ ಮಾಗಡಿ, ಸಯ್ಯದ್ ಖಾಲೀದ್ ಕೊಪ್ಪಳ ಇದ್ದರು.
ಎನ್‌ಡಿಎ ಸರಕಾರಕ್ಕೆ ಆಯುಷ್ಯ ಇಲ್ಲ
ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ದುರಹಂಕಾರಿ ಸರಕಾರಕ್ಕೆ ಸಂದೇಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ತಕ್ಕಪಾಠ ಕಲಿಸಿದ್ದಾರೆ. ಎನ್‌ಡಿಎ ಸರ್ಕಾರಕ್ಕೆ ಆಯುಷ್ಯ ಬಹಳ ಕಡಿಮೆ ಇದ್ದು, ಹೆಚ್ಚು ದಿನ ಉಳಿಯದು. ಪ್ರಧಾನಿ ಮೋದಿ ಸಬ್ ಕಾ ವಿಶ್ವಾಸ್ ಕಳೆದುಕೊಂಡಿದ್ದಾರೆ. ಆಬ್ ಕಿ ಬಾರ್ ಚಾರಸೋ ಪಾರ್ ಅಂತ ಹೇಳುತ್ತಿದ್ದರೂ, ಆದರೆ ಅವರು 250 ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಮೋದಿ ಅವರು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಹುನ್ನಾರ ಮಾಡಿದ್ದ ಅವರಿಗೆ ಜನರು ತಕ್ಕಪಾಠ ಕಲಿಸುವ ಮೂಲಕ ಸಂದೇಶ ನೀಡಿದ್ದಾರೆ ಎಂದರು.