ವಿಜಯಸಾಕ್ಷಿ ಸುದ್ದಿ, ನರಗುಂದ : ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಸರಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಲಾಲಸಾಬ ಅರಗಂಜಿ ಅಭಿಮಾನಿ ಬಳಗದ ವತಿಯಿಂದ ಲಾಲಸಾಬ ಅರಗಂಜಿ ಅವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ದಿವ್ಯ ಸಾನ್ನಿಧ್ಯ ವಹಿಸಿದ್ದ ತೋಂಟದಾರ್ಯ ಮಠ ಶಿರೋಳದ ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಲಾಲಸಾಬ ಅರಗಂಜಿ ಅವರು ಅವರ ತಂದೆಯ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿದ್ದಾರೆ. ತಂದೆಯವರ ಮಾರ್ಗದಲ್ಲೇ ನಡೆಯುತ್ತಿರುವ ಇವರು ಸದಾ ಗಾಳಿ, ಬೆಳಕಿನಂತೆ ಕ್ರಿಯಾಶೀಲರಾಗಿ ಸಾಮಾಜಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ 2024ನೇ ಸಾಲಿನ ತೋಂಟದಾರ್ಯ ಜಾತ್ರೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಭಾವಕ್ಯತೆಯ ಮೆರುಗನ್ನು ಜಗತ್ತಿನೆಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ ಎಂದರು.
ಶ್ರೀ ಮಾದಾರ ಚೆನ್ನಯ್ಯ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಸಾಲಿಮಠ ಗುರುಗಳು ಮಾತನಾಡಿ, ದುಂದು ವೆಚ್ಚದ ಜನ್ಮದಿನಕ್ಕೆ ಕಡಿವಾಣ ಹಾಕಿ ಇಂತಹ ಆದರ್ಶ ಮತ್ತು ಮಾದರಿಯಾಗುವಂತಹ ಕೆಲಸಗಳನ್ನು ಮಾಡುವ ಮೂಲಕ ಲಾಲಸಾಬ ಅರಗಂಜಿ ಅಭಿಮಾನಿ ಬಳಗವು ಮೌಲ್ಯವುಳ್ಳ ಔಚಿತ್ಯಪೂರ್ಣ ಕಾರ್ಯವನ್ನು ಮಾಡಿದೆ ಎಂದರು.
ಟಿ.ಜಿ.ಎಂ.ಸಿ.ಎಸ್ ಪ್ರಧಾನಗುರು ಎಸ್.ಎಂ. ಶಿರಿ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ಕಾಡಪ್ಪನವರ, ಎಸ್.ಬಿ. ದಾಸರ, ಎಸ್.ಕೆ. ಮೂಲಿಮನಿ, ಎ.ಬಿ. ಅಸೂಟಿ ಪಾಲ್ಗೊಂಡಿದ್ದರು. ಕೆ.ಜಿ.ಎಸ್ ಶಾಲೆಯ ಶಿಕ್ಷಕ ಎ.ವಿ. ಹಲಗತ್ತಿ ಪ್ರಾಸ್ತಾವಿಕ ನುಡಿಯನ್ನಾಡಿದರು. ಪಿ.ಎಸ್. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಲಾಲಸಾಬ ಅರಗಂಜಿ ಅಭಿಮಾನಿ ಬಳಗದ ಬೀರಪ್ಪ ಕಾಡಪ್ಪನವರ, ಅಕ್ಷಯ ಗಡೇಕಾರ, ರಾಜೇಸಾಬ ಚಳ್ಳಮರದ, ಗಿರೀಶ ಗಾಣಿಗೇರ, ಸದ್ದಾಂ ಯಲಿಗಾರ, ರಫೀಕ ಮೂಲಿಮನಿ, ಶರಣಪ್ಪ ಮಡಿವಾಳರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.