HomeGadag Newsಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಅನ್ನದಾತ

ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಅನ್ನದಾತ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶಿರಹಟ್ಟಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಈಗಾಗಲೇ ತಮ್ಮ ಜಮೀನುಗಳನ್ನು ಬಿತ್ತನೆಗೆ ಸಿದ್ದಗೊಳಿಸಿ ಇದೀಗ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ರೈತರಲ್ಲಿ ಭರವಸೆ ಜೊತೆಗೆ ಹೊಸ ಚೈತನ್ಯವೂ ಸಹ ಇಮ್ಮಡಿಯಾಗಿದೆ.

ಶಿರಹಟ್ಟಿ ಹೋಬಳಿಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 34445 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಪ್ರಮುಖವಾಗಿ 25 ಸಾವಿರ ಹೆಕ್ಟೇರ ಗೋವಿನಜೋಳ, 3200 ಹೆ.ಹೆಸರು, 110 ಹೆ.ತೊಗರಿ, 3100 ಹೆ.ಶೇಂಗಾ, 200 ಹೆ.ಸೂರ್ಯಕಾಂತಿ, 1610 ಹೆ.ಹತ್ತಿ, 65 ಹೆ.ಜೋಳ, 460 ಹೆ.ಭತ್ತ, 500 ಹೆ ಕಬ್ಬು ಬೆಳೆಗಳ ಬಿತ್ತನೆ ಗುರಿಯನ್ನು ಹೊಂದಲಾಗಿದೆ.

ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬೀಜ, ಔಷಧಿ ಹಾಗೂ ಲಘು ಪೋಷಕಾಂಶಗಳನ್ನು ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಸರು-75 ಕ್ವಿಂ, ತೊಗರಿ-90 ಕ್ವಿಂ, ಗೋವಿನಜೋಳ-850 ಕ್ವಿಂ, ಶೇಂಗಾ-25 ಕ್ವಿಂ ದಾಸ್ತಾನಿದ್ದು, ಇನ್ನೂ ಹೆಚ್ಚಿನ ದಾಸ್ತಾನು ಬರುವ ಸಾಧ್ಯತೆ ಇದೆ. ಒಂದು ಕೆಜಿ ಹೆಸರಿಗೆ ಸಾಮಾನ್ಯ ರೈತರಿಗೆ 24ರೂ., ಪಜಾ/ಪಪಂ ರೈತರಿಗೆ 36 ರೂ, ತೊಗರಿ ಸಾಮಾನ್ಯ ರೈತರಿಗೆ 25 ರೂ. ಎಸ್/ಎಸ್‌ಟಿ ರೈತರಿಗೆ 37.5ರೂ , ಗೋವಿನ ಜೋಳ ಸಾಮಾನ್ಯ ರೈತರಿಗೆ 20 ರೂ, ಎಸ್‌ಸಿ/ಎಸ್‌ಟಿ ರೈತರಿಗೆ 30 ರೂ. ಕೆಜಿಗೆ ಸರಕಾರದ ಸಹಾಯಧನ ನಿಗದಿ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈತರು ಬಿತ್ತನೆ ಸಂದರ್ಭದಲ್ಲಿ ತೇವಾಂಶವನ್ನು ಪರಿಶೀಲಿಸಿ ಬಿತ್ತನೆಗೆ ಬೇಕಾದ ತೇವಾಂಶವಿದ್ದರೆ ಮಾತ್ರ ಬಿತ್ತನೆ ಮಾಡಬೇಕು. ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಇದರಿಂದ ಮಣ್ಣಿನಿಂದ ಹರಡುವ ಹಲವಾರು ರೋಗಗಳು ಬಾರದಂತೆ ತಡೆಗಟ್ಟಬಹುದಾಗಿದೆ. ಮಣ್ಣಿನಲ್ಲಿ ಸಾವಯವ ಇಂಗಾಲ ಮತ್ತು ಲಘುಪೋಷಕಾಂಶಗಳ ಕೊರತೆ ಇರುವುದರಿಂದ ಸಾವಯವ ಗೊಬ್ಬರ, ಲಘುಪೋಷಕಾಂಶಗಳನ್ನು ಬಳಸಬೇಕು. ಆರಂಭಿಕ ಹಂತದಲ್ಲಿರುವ ಹೆಸರು ಬೆಳೆಗೆ ಪೋಷಕಾಂಶದ ಕೊರತೆಯಿಂದಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ನ್ಯಾನೋ ಯ್ಯೂರಿಯಾ ಅಥವಾ ಶೇ.100 ನೀರಿನಲ್ಲಿ ಕರಗುವ 19:19:19 (5.0ಗ್ರಾಂ/ಲೀ)+ಲಘು ಪೋಷಕಾಂಶಗಳ ಮಿಶ್ರಣ (1-1.5ಗ್ರಾಂ/ಲೀ) ಸಿಂಪರಣೆ ಮಾಡಬೇಕು. ಬಿತ್ತನೆ ಮಾಡುವಾಗ ಶಿಫಾರಸ್ಸು ಮಾಡಲಾದ ಒಟ್ಟು ಸಾರಜನಕದ ಶೇ.50 ಮತ್ತು ಸಂಪೂರ್ಣ ಪ್ರಮಾಣದ ರಂಜಕ ಮತ್ತು ಪೋಟ್ಯಾಶ್ ರಸಗೊಬ್ಬರ ಉಪಯೋಗಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ತಿಳುವಳಿಕೆ ನೀಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೆಶಕ ರೇವಣೆಪ್ಪ ಮನಗೂಳಿ, ಮುಂಗಾರು ಮಳೆ ಉತ್ತಮವಾಗಿರುವದರಿಂದ ಒಳ್ಳೆಯ ಬೆಳೆ ಬರುವ ನಿರೀಕ್ಷೆ ಹೊಂದಲಾಗಿದೆ. ಇಲಾಖೆಯಿಂದ ಪ್ರಮಾಣೀಕೃತ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಪಡೆದುಕೊಳ್ಳಬೇಕು ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!