ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಘಟಕದಿಂದ ಮಂಗಳವಾರ ಬಸ್ ನಿಲ್ದಾಣದ ಎದುರಿನಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಜಮಾಯಿಸಿದ್ದ ಬಿಜೆಪಿಯ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಪ್ರತಿಭಟನೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪರಿಶಿಷ್ಟರಿಗೆ ಮೀಸಲಾಗಿರುವ ಸಾವಿರಾರು ಕೋಟಿ ರೂ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದನ್ನು ನೋಡಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪೊಳ್ಳು ಗ್ಯಾರಂಟಿಗಳನ್ನು ಈಡೇರಿಸಲು ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಜನಸಾಮಾನ್ಯರು ಉಪಯೋಗಿಸುವ ಹಾಲು, ವಿದ್ಯುತ್, ಸ್ಟಾಂಪ್ ಡ್ಯೂಟಿ, ವಾಹನ ನೋಂದಣಿ ಸೇರಿದಂತೆ ರೈತರು ಉಪಯೋಗಿಸುವ ಬಿತ್ತನೆ ಬೀಜ, ಪಹಣಿ ಪತ್ರ, ಆಸ್ತಿಗಳ ನೋಂದಣಿ ಶುಲ್ಕ, ಇಂಜಿನಿಯರಿಂಗ್ ಪ್ರವೇಶ ಶುಲ್ಕ, ವಾಹನಗಳ ಮೇಲೆ ತೆರಿಗೆ ಸೇರಿದಂತೆ ಹತ್ತಾರು ಬೆಲೆ ಏರಿಕೆ ಜೊತೆಗೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿರುವುದು ಸರ್ಕಾರ ದಿವಾಳಿಯಾಗಿದೆ ಎಂದು ನಿರೂಪಿಸುತ್ತಿದೆ. ಸರ್ಕಾರ ಕೂಡಲೇ ಬೆಲೆ ಏರಿಕೆ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರು ಹಳ್ಳಿ ಹಳ್ಳಿಗಳಲ್ಲಿ ಹೋರಾಟ ನಡೆಸಲಿದ್ದಾರೆ ಎಂದರು.
ಗದಗ ಜಿಲ್ಲಾ ರೈತ ಮೋರ್ಚಾ ಮುಖಂಡ ಡಿ.ವೈ. ಹುನಗುಂದ, ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಅಶೋಕ ಶಿರಹಟ್ಟಿ, ಎಂ.ಆರ್. ಪಾಟೀಲ, ಅಶೋಕ ಪಲ್ಲೇದ ಮಾತನಾಡಿ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರಿಗೆ ಉಚಿತ ಭಾಗ್ಯಗಳನ್ನು ನೀಡಿ ಮತ್ತೊಂದು ಕೈಯಿಂದ ಎರಡು ಪಟ್ಟು ಹಣ ತೆರಿಗೆ ಮೂಲಕ ಕಿತ್ತುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 12 ತಿಂಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿ, ಬಸ್ ದರ ಹೆಚ್ಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಶಿವಯೋಗಿ ಅಂಕಲಕೋಟಿ, ಮಂಜುನಾಥ ಗೊರವರ, ನಿಂಗಪ್ಪ ಬನ್ನಿ, ನೀಲಪ್ಪ ಹತ್ತಿ, ಬಸವರಾಜ ಚಕ್ರಸಾಲಿ, ಗಿರೀಶ ಚೌರಡ್ಡಿ, ಮುತ್ತಣ್ಣ ಚೋಟಗಲ್, ಬಾಬಣ್ಣ ವೇರ್ಣೆಕರ, ಪ್ರಕಾಶ ಮಾದನೂರ, ಶಕ್ತಿ ಕತ್ತಿ, ಸಂತೋಷ ಜಾವೂರ, ತುಕ್ಕಪ್ಪ ಪೂಜಾರ, ಚನ್ನಪ್ಪ ಕರೆಯತ್ತಿನ, ಈರಣ್ಣ ಪೂಜಾರ, ಜಗದೀಶಗೌಡ ಪಾಟೀಲ, ನಾಗರಾಜ ಹುನಗುಂದ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸಚಿವರಿಗೆ ಅನುದಾನ ದೊರೆಯುತ್ತಿಲ್ಲ. ಯಾವುದೇ ಸಚಿವರನ್ನು ಭೇಟಿಯಾಗಿ ಅನುದಾನಕ್ಕೆ ಮನವಿ ಮಾಡಿದರೆ ಅಲ್ಲಿ ಇಲ್ಲ ಎನ್ನುವ ಉತ್ತರ ಸಿದ್ಧವಾಗಿರುತ್ತದೆ. ಗ್ಯಾರಂಟಿಗಳಿಗೆ ಹಣ ಹೊಂದಿಸುವ ನಿಟ್ಟಿನಲ್ಲಿ ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ತಿಲಾಂಜಲಿ ಇಟ್ಟಿದೆ. 14-15 ಬಜೆಟ್‌ಗಳನ್ನು ಮಂಡಿಸಿದ್ದ ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ ನೀಡಿದ ಕೊಡುಗೆ ಶೂನ್ಯವಾಗಿದೆ.
– ಡಾ. ಚಂದ್ರು ಲಮಾಣಿ, ಶಾಸಕರು.