ಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ಕಳೆದ ಬಜೆಟ್‌ನಲ್ಲಿ ಪ್ರೋತ್ಸಾಹ ಧನಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಪಶುಪಾಲನಾ ಇಲಾಖೆ ಇತರೆ ಖರ್ಚು ವೆಚ್ಚಗಳಿಗೆ ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಷಯದ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನು ನೀಡಬೇಕು.
ಬಾಕಿ ಉಳಿದಿರುವ ಎಂಟು ತಿಂಗಳ ಹಣವನ್ನು ಯಾವಾಗ ಕೊಡುತ್ತಾರೆ ಎಂದು ರೈತರು ಪ್ರಶ್ನಿಸಿದರೆ, ಹಾಲು ಒಕ್ಕೂಟದ ಅಧಿಕಾರಿಗಳು ಸಹಕಾರಿ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಸಹಕಾರ ಇಲಾಖೆಯವರು ಆರ್ಥಿಕ ಇಲಾಖೆ ಮೇಲೆ ಬೊಟ್ಟು ಮಾಡುತ್ತಾರೆ. ಈ ಗೊಂದಲದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ವಕ್ಕರ, ಅಶೋಕ ಕರೂರ ಮಾತನಾಡಿ, ಹಾಲಿನ ಪ್ರೋತ್ಸಹ ಧನವೂ ಇಲ್ಲ, ಬರ ಪರಿಹಾರದ ಹಣವೂ ಇಲ್ಲ. ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಭೂ ಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ, ರೈತ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಲಾಗಿದೆ ಮತ್ತು ರೈತರಿಗೆ ಅತ್ಯಂತ ನಿಕಟವಾಗಿರುವ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಬೆಲೆ ಏರಿಕೆಯನ್ನು ಬಳುವಳಿಯಾಗಿ ಕೊಟ್ಟ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ, ಪಶು ಆಹಾರಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ರೂ. 500 ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಪತಿ ಉಡುಪಿ, ಬಿ.ಎಸ್. ಚಿಂಚಲಿ, ಅಶೋಕ ಸಂಕಣ್ಣವರ, ಸಿದ್ದಪ್ಪ ಈರಗಾರ, ಶಂಕರ ಕರಿಬಿಷ್ಠಿ, ಪಕ್ಕಿರೇಶ ರಟ್ಟಿಹಳ್ಳಿ, ಶಿವಪ್ಪ ಮುಳ್ಳಾಳ, ಪ್ರಭು ಕಲಬಂಡಿ, ಗುರುಶಾಂತಗೌಡ ಮರೀಗೌಡ್ರ, ಸಂತೋಷ ಅಕ್ಕಿ, ಮಹೇಶ ಶಿರಹಟ್ಟಿ, ಸುಧಿರ ಕಾಟಿಗರ, ಗಂಗಾಧರ ಹಬೀಬ, ದೇವಪ್ಪ ಗೊಟೂರ, ವಿಶ್ವನಾಥ ಟೆಂಗಿನಕಾಯಿ, ಸುರೇಶ ಮರಳಪ್ಪನವರ, ಸುರೇಶ ಚಿತ್ತರಗಿ, ಸಿದ್ರಾಮೇಶ ಹಿರೇಮಠ, ಮುತ್ತಣ್ಣ ಮೂಲಿಮನಿ, ವಿಜಯ ಕುರ್ತಕೋಟಿ, ಶಾಂತಯ್ಯ ಮುತ್ತಿನಪೆಂಡಿಮಠ, ಇರ್ಷಾದ ಮಾನ್ವಿ, ಚನ್ನಮ್ಮ ಹುಳಕಣ್ಣವರ, ವಿಶ್ವನಾಥ ಶಿರಿಗಣ್ಣವರ, ರವಿ ಸಿದ್ಲಿಂಗ, ಕಮಲಾಕ್ಷಿ ಅಂಗಡಿ, ಶಿವಾಜಿ ಚವ್ಹಾಣ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹಾಲಿನ ದರವನ್ನು ರೂ.4ರಷ್ಟು ಏರಿಸಿ ಆ ಹಣವನ್ನು ರೈತರಿಗೆ ತಲುಪಿಸಲಾಗುವುದು ಎಂದು ಹೇಳಿಕೆ ಕೊಟ್ಟು, ಏಕೆ ರೈತರಿಗೆ ತಲುಪಿಸಿಲ್ಲ. ಮತ್ತೆ ಈಗ ಅದೇ ಕಾರಣವನ್ನು ನೀಡಿ 2 ರೂ ಹೆಚ್ಚಿಸಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೊರಣೆಗಳಿಗೆ ಇವೆಲ್ಲ ಸಾಕ್ಷಿಯಾಗಿವೆ. ಇಂತಹ ಸರ್ಕಾರ ಅಧಿಕಾರದಲ್ಲಿರಬಾರದು. ಕೂಡಲೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಜ್ಯದ ರೈತರನ್ನು ಕಾಪಾಡಲಿ ಎಂದು ಆಗ್ರಹಿಸಿದರು.