ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ನರಗುಂದ ತಾಲೂಕಿನ ಕುರುಗೋವಿನಕೊಪ್ಪದ ಬಸಪ್ಪ ಚಂದ್ರ ಅವರ ಜಮೀನಿನಲ್ಲಿ ಬೆಳೆದ ಹತ್ತಿಯಲ್ಲಿ ಒಂದು ಎಕರೆದಷ್ಟನ್ನು ದುಷ್ಕರ್ಮಿಗಳು ಕೊಯ್ದು ಹಾಕಿದ ಘಟನೆ ಅ. 16 ರ ಮಧ್ಯರಾತ್ರಿ ನಡೆದಿದೆ.
ಸಾಲ-ಸೋಲ ಮಾಡಿ ತಮ್ಮ ಹೊಲದಲ್ಲಿ ಹತ್ತಿ ಬೆಳೆದಿರುವ ಬಡ ರೈತ ಬಸಪ್ಪ ಚಂದ್ರ ಅವರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ, ಈ ಬಾರಿ ಅವರ ಸಹೋದರ ಭಗವಂತ ಚಂದ್ರ ಅವರ ಒಂದು ಎಕರೆ ಜಮೀನು ಲಾವಣಿ ಪಡೆದು ಅದನ್ನು ಉಳುಮೆ ಮಾಡಿ ಹತ್ತಿ ಬಿತ್ತಿದ್ದರು. ಒಟ್ಟು 2.10 ಎಕರೆಯಲ್ಲಿ ಸುಮಾರು ಒಂದು ಎಕರೆಯಷ್ಟು ಹತ್ತಿ ಬೆಳೆಯನ್ನು ಗಿಡಗಳ ಸಮೇತ ದುಷ್ಕರ್ಮಿಗಳು ಕೊಯ್ದು ಹಾಕಿದ್ದಾರೆ.
ಹಿರೇಕೊಪ್ಪ ಕ್ಷೇತ್ರದ ತಾಪಂ. ಸದಸ್ಯ ಗಿರೀಶ ನೀಲರಡ್ಡಿ, ಕನ್ನಡ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ವಿಜಯ ಕೋತಿನ ಹಾಗೂ ಗ್ರಾಮಸ್ಥರಾದ ರಾಮಣ್ಣ ಕಮಕೇರಿ, ಕೃಷ್ಟಪ್ಪ ಸತರಡ್ಡಿ, ಗೋಪಾಲ ಸತರಡ್ಡಿ, ನಾರಾಯಣ ಬಾಲರಡ್ಡಿ ಜಮೀನಿಗೆ ತೆರಳಿ, ಹಾಳಾದ ಹತ್ತಿ ಬೆಳೆ ಪರಿಶೀಲಿಸಿದರು. ಸ್ಥಳೀಯ ಪೊಲೀಸ್ ಠಾಣೆಗೆ ಬಸಪ್ಪ ಚಂದ್ರ ದೂರು ದಾಖಲಿಸಿದ್ದಾರೆ. ಸಿಪಿಐ ಡಿ.ಬಿ. ಪಾಟೀಲ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೊಲದಲ್ಲಿ ಬೆಳೆದಿದ್ದ ಹತ್ತಿ ಗಿಡ ಕೊಯ್ದು ಹಾನಿ
Advertisement