ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆಯ ನಿರ್ದೇಶಕರಾದ ಡಾ.ಶ್ರೀನಿವಾಸ್ ಜಿ.ಎನ್ ಅನಿರೀಕ್ಷಿತ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆ ಪರಿಶೀಲಿಸಿ ವೈದ್ಯಾಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆ ನೀಡಿದರು.
ಆಸ್ಪತ್ರೆಯ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಅವರು, ಆರೋಗ್ಯ ಇಲಾಖೆಯಿಂದ ರೋಗಿಗಳಿಗೆ ಸಿಗುವ ಎಲ್ಲ ವ್ಯವಸ್ಥೆ, ಸೌಲಭ್ಯಗಳನ್ನು ರೋಗಿಗಳಿಗೆ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಬಲವಾಗಬೇಕು. ಯಾವುದೇ ಸೌಲಭ್ಯದಿಂದ ಅರ್ಹರು ವಂಚಿತರಾಗಬಾರದು. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ವಾರ್ಡ್ನ ಪರಿಸ್ಥಿತಿ ವೀಕ್ಷಿಸಿದ ಅವರು, ವಾರ್ಡ್ಗಳಲ್ಲಿ ಪುರುಷ, ಮಹಿಳೆ, ಮಕ್ಕಳಿಗೆ ಪ್ರತ್ಯೇಕ ಬೆಡ್‌ನಲ್ಲಿ ಚಿಕಿತ್ಸೆ ನೀಡಬೇಕು. ರೋಗಿಗಳಿಂದ ಬಂದ ಪರ-ವಿರೋಧ ಅಭಿಪ್ರಾಯ ಪಡೆದು ದೂರುಗಳು ಬರದಂತೆ ಕರ್ತವ್ಯ ನಿರ್ವಹಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಮಳೆಗಾಲವಾದ್ದರಿಂದ ಹೆಚ್ಚುತ್ತಿರುವ ಡೆಂಗ್ಯೂ ಜ್ವರದ ಬಗ್ಗೆ ನಿಗಾವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದ ಅವರು, ಆಸ್ಪತ್ರೆಯ ಎಲ್ಲ ವ್ಯವಸ್ಥೆ ಮತ್ತು ಹೊರಾವರಣದಲ್ಲಿರುವ ವಸತಿ ಗೃಹಗಳ ಸುತ್ತಮುತ್ತ ಇರುವ ಅನೈರ್ಮಲ್ಯದ ವಾತಾವರಣ ಪರಿಶೀಲಿಸಿ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾ ವೈದ್ಯಾಧಿಕಾರಿ ಡಾ. ಶಿವಪ್ರಕಾಶ ನೀಲಗುಂದ, ಡಿಟಿಓ ಆರುಂಧತಿ ಕುಲಕರ್ಣಿ, ಡಿಎಸ್‌ಓ ಡಾ. ವೆಂಕಟೇಶ ರಾಠೋಡ, ಡಾ. ವೈ.ಕೆ ಭಜಂತ್ರಿ, ಡಾ. ಬಸರಿಗಿಡದ, ಟಿಎಚ್‌ಓ ಡಾ. ಸುಭಾಸ ದಾಯಗೊಂಡ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಸೇರಿ ವೈದ್ಯರು, ಸಿಬ್ಬಂದಿಗಳು ಇದ್ದರು.