ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಆರೋಗ್ಯ ಇಲಾಖೆಯ `ವೈದ್ಯಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗದಗ ಜಿಲ್ಲೆಯವರೇ ಆದ ಡಾ. ಶ್ರೀಕಾಂತ ಕಾಟೇವಾಲೆ ಅವರು 2006ರಿಂದಲೇ ಲಕ್ಷ್ಮೇಶ್ವರಲ್ಲಿ ವೈದ್ಯರಾಗಿ ಸೇವೆ ಪ್ರಾರಂಭಿಸಿ, ಶಿರಹಟ್ಟಿ ತಾಲೂಕಾ ಪ್ರಭಾರ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಗದಗ ತಾಲೂಕಿನ ನಾಗಾವಿ ಆಸ್ಪತ್ರೆಯಲ್ಲಿ ಕೆಲ ವರ್ಷ ಮತ್ತು ಬಹುತೇಕ ಲಕ್ಷ್ಮೇಶ್ವರಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
18 ವರ್ಷಗಳ ಸೇವಾ ಅವಧಿಯಲ್ಲಿ ರೋಗಿಗಳ, ಸಾರ್ವಜನಿಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅನೇಕ ತುರ್ತು ಸಂದರ್ಭದಲ್ಲಿ ಬಡರೋಗಿಗಳಿಗೆ ತಮ್ಮ ಸ್ವಂತ ಹಣದಲ್ಲಿ ಹೊರಗಡೆಯ ಚಿಕಿತ್ಸಾ ವೆಚ್ಚ ಭರಿಸಿ ಮಾನವೀಯತೆ ಮರೆದ ಸಾಕಷ್ಟು ಉದಾಹರಣೆಗಳಿವೆ. ಮೃದು ಸ್ವಭಾವದ ಅವರು ತಮ್ಮ ಮಾತಿನಿಂದಲೇ ರೋಗಿಗಳ ಹೃದಯ ಗೆಲ್ಲುತ್ತಾ ಎಂತಹ ಸಂದಿಗ್ಧ ಪರಿಸ್ಥಿತಿಯನ್ನೂ ಸಮಾಧಾನದಿಂದ ನಿಭಾಯಿಸಿ ಕರ್ತವ್ಯ ಪ್ರಜ್ಞೆಯ ಜತೆಗೆ ಇಲಾಖೆಯ ಗೌರವ ಹೆಚ್ಚಿಸಿದ್ದಾರೆ. ಇವರ ಸೇವಾನಿಷ್ಠೆ, ಪ್ರಾಮಾಣಿಕತೆ ಪರಿಗಣಿಸಿ ರಾಜ್ಯಮಟ್ಟದ `ವೈದ್ಯಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜುಲೈ 1ರಂದು ಬೆಂಗಳೂರಿನಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಪ್ರಶಸ್ತಿ ನೀಡಿ ಗೌರವಿಸಿದರು.