ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ತಾಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆ ವತಿಯಿಂದ ಸಾರಿಗೆ ಘಟಕದ ಪ್ರಭಾರಿ ವವ್ಯಸ್ಥಾಪಕರಿಗೆ ಮನವಿ ನೀಡಲಾಯಿತು.
ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಬರುತ್ತಾರೆ. ಆದರೆ ಅವರಿಗೆ ಸರಿಯಾಗಿ ಬಸ್ ಸೌಕರ್ಯ ಇಲ್ಲದೆ ಪರದಾಡುವಂತಾಗಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಸಂಘಟಕರು ದೂರಿದರು.
ಸಮೀಪದ ನಾಗರಸಕೊಪ್ಪ ತಾಂಡಾ, ಮಾಟರಂಗಿ ತಾಂಡಾ, ಬೆಣಚಮಟ್ಟಿ ಮಾರ್ಗವಾಗಿ ಒಂದು ಬಸ್‌ನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಸಮಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಬೇಕು.
ಪ್ರತೀ ಶೈಕ್ಷಣಿಕ ವರ್ಷ ಆರಂಭದಲ್ಲಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಪ್ರಭಾರಿ ಡಿಪೋ ಮ್ಯಾನೇಜರ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಹೊಸ ಡಿಪೋ ಮ್ಯಾನೇಜರ್ ಬಂದ ಕೂಡಲೇ ಈ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ ಎಂದರು.
ಈ ವೇಳೆ ಗಣೇಶ ರಾಠೋಡ, ಶರಣು ಎಂ., ಚಂದ್ರು ರಾಠೋಡ, ಬಸವರಾಜ ಪೂಜಾರ, ಪರಶುರಾಮ ಕೊನಸಾಗರ, ಬಸು ಪಾಟೀಲ, ಸುಭಾಷ್ ಬಡಿಗೇರ, ನೀಲಕಂಠ ಕರಡಿ, ಮಹಾಂತೇಶ ಜೋಗಿ, ಅರುಣಕುಮಾರ ಕೊಟ್ಟುರು, ಅನಿಲ ಜಡದೇರ್, ಪ್ರತೀಕ ಪಲ್ಲೇದ ಮುಂತಾದವರಿದ್ದರು.