ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಜುಲೈ 7ರಂದು ನಡೆಸಲು ನಿರ್ಧರಿಸಿರುವ ಗದಗ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸುವದಕ್ಕೆ ಎಲ್ಲರ ಸಹಕಾರ ಅವಶ್ಯವಾಗಿದ್ದು, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈ ಪಂದ್ಯಾವಳಿಯನ್ನು ಸಂಘಟಿಸಲಾಗುತ್ತಿದೆ ಎಂದು ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ನೂತನ ಅಧ್ಯಕ್ಷ ಗಿರೀಶ ಅಗಡಿ ಹೇಳಿದರು.
ಅವರು ಸೋಮವಾರ ಪಂದ್ಯಾವಳಿ ಕುರಿತು ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಕ್ರೀಡಾಸಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ 2008ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯ ಚೆಸ್ ಅಸೋಸಿಯೇಷನ್ ಸಹಕಾರದಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಅಲ್ಲದೆ ಚೆಸ್ ಪಟುಗಳಿಗೆ ಶ್ರೇಷ್ಠ ಚೆಸ್ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದ್ದು, ಈ ಬಾರಿ ಶಿಕ್ಷಣ ಇಲಾಖೆಯವರು ಪ್ರತಿವರ್ಷ ನಡೆಯುವ ಶಾಲಾ ಪಂದ್ಯಾವಳಿಯಲ್ಲಿ ಚೆಸ್ ಆಟವನ್ನು ಸಹ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಗೆ ಅವಕಾಶ ನೀಡಿದೆ. ಜುಲೈ 7ರಂದು ನಡೆಯುವ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಗದಗ, ರೋಣ, ಮುಂಡರಗಿ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕುಗಳಿಂದ ಸುಮಾರು 200-250 ಸ್ಪರ್ಧಾಳುಗಳು ಭಾಗವಹಿಸಲಿದ್ದು, ಇದರಲ್ಲಿ ಆಯ್ಕೆಯಾದ ಮಕ್ಕಳನ್ನು ಗದಗ ಜಿಲ್ಲಾ ತಂಡವಾಗಿ ರಾಜ್ಯಮಟ್ಟಕ್ಕೆ ಕಳುಹಿಸಿ ಕೊಡಲಾಗುವದು ಎಂದು ಹೇಳಿದರು.
ಸಂಸ್ಥೆಯ ಚೇರಮನ್ ರಾಮರಾವ್ ವೇರ್ಣೆಕರ, ಎಂ.ಐ. ಕಣಕೆ ಮಾತನಾಡಿ, ಸಂಸ್ಥೆಯ ವತಿಯಿಂದ ನಡೆಯುವ ಈ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವದಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಜು.7ರಂದು ಮುಂಜಾನೆ 7 ಗಂಟೆಗೆ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ ನುರಿತ ತರಬೇತಿದಾರರು ನಿರ್ಣಾಯಕರಾಗಿ ಆಗಮಿಸಲಿದ್ದಾರೆ. 12, 14 ಹಾಗೂ 16 ವರ್ಷಗಳ ವಿಭಾಗದಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಪಂದ್ಯಾವಳಿ ನಡೆಯಲಿದೆ. ಭಾಗವಹಿಸಲಿಚ್ಛಿಸುವವರು ಆಧಾರ್ ಕಾರ್ಡ್ಗಳ ಮೂಲಕ ಹೆಸರು ನೋಂದಾಯಿಸಬಹುದಾಗಿದೆ. ಇಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಆದೇಶ ಹುಲಗೂರ, ಆರ್.ಎ. ಮುಲ್ಲಾ, ಎ.ಜೆ. ಬೂದಿಹಾಳ, ಎಸ್.ಎಂ. ಪೂಜಾರ, ನಿರಂಜನ ವಾಲಿ ಮುಂತಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಮಂಜುನಾಥ ಅಂಗಡಿ ಸ್ವಾಗತಿಸಿದರು.
ಪಂದ್ಯಾವಳಿಯಲ್ಲಿ ಭಾಗವಹಿಸುವ ಗದಗ ಜಿಲ್ಲೆಯ ಮಕ್ಕಳು ಹೆಚ್ಚಿನ ಮಾಹಿತಿಗೆ ಎಂ.ಆಯ್. ಕಣಕೆ-9945859815 ಇವರನ್ನು ಸಂಪರ್ಕಿಸಬಹುದು. ಆಧಾರ್ ಕಾರ್ಡ್ಗಳನ್ನು ಇದೇ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಿ ಹೆಸರು ನೋಂದಾಯಿಸಬಹುದು.