ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಅಡುಗೆ ತಯಾರಿಸುವ ಆ ಕುಟುಂಬದ ಮಹಿಳೆಯ ಕೈಯಲ್ಲಿಯೇ ಇಡೀ ಕುಟುಂಬದ ಸದಸ್ಯರ ಆರೋಗ್ಯ ಅಡಗಿರುತ್ತದೆ. ಈ ದಿಸೆಯಲ್ಲಿ ಅಡುಗೆ ಮನೆಯೇ ಔಷದಾಲಯ, ಅಡುಗೆ ತಯಾರಿಸುವ ಮಹಿಳೆಯೇ ವೈದ್ಯೆ ಎಂದು ಗದಗ ಡಿ.ಜಿ.ಎಂ. ಆರ್ಯುದೀಕ್ ಮಹಾವಿದ್ಯಾಲಯದ ಸ್ತ್ರೀರೋಗ ತಜ್ಞೆ ಡಾ. ಸುವರ್ಣ ನಿಡಗುಂದಿ ಅಭಿಪ್ರಾಯಪಟ್ಟರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಾಖೆಯಲ್ಲಿ ಶಿವ-ಪಾರ್ವತಿ ಯೋಗ ಫೌಂಡೇಶನ್ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಮಹಿಳೆಯು ಇಡೀ ಕುಟುಂಬದ ಉತ್ತಮ ಆರೋಗ್ಯ ಸ್ತಂಭವಾಗಿದ್ದಾಳೆ. ಹೀಗಾಗಿ, ಅಡುಗೆ ಮನೆಯೇ ಔಷಧಾಲಯವಾಗಿದ್ದು, ಅಲ್ಲಿ ಪ್ರತೀ ಆಹಾರ ಪದಾರ್ಥಗಳು ಔಷಧಿಯ ಗುಣಗಳನ್ನು ಹೊಂದಿರುತ್ತವೆ. ಅಡುಗೆಯನ್ನು ತಯಾರಿಸುವ ಮಹಿಳೆಯು ಸಮರ್ಪಕವಾಗಿ ಪದಾರ್ಥಗಳನ್ನು ಬಳಸಿ ಆಹಾರ ತಯಾರಿಸಿ ಕುಟುಂಬಸ್ಥರಿಗೆ ಬಡಿಸುತ್ತಾಳೆ. ಮಹಿಳೆಯು ಮನೆಗೆಲಸದ ಜೊತೆ ತಾನು ಸಮಯಕ್ಕೆ ಸರಿಯಾಗಿ ಆಹಾರ ಪಡೆಯಿದಿದ್ದರೆ ಅನಾರೋಗ್ಯಕ್ಕೀಡಾಗುತ್ತಾಳೆ. ಇದರಿಂದ ಇಡೀ ಮನೆಯ ಆರೋಗ್ಯವೂ ಕೆಡಬಹುದು. ಆದ್ದರಿಂದ, ಈ ಸಲ ಮಹಿಳಾ ಸಬಲೀಕರಣಕ್ಕಾಗಿ ಯೋಗ ದಿನಾಚರಣೆ ಆಚರಿಸಿದ್ದು, ಮಹಿಳೆಯರು ದಿನ ನಿತ್ಯ ಯೋಗ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕೆಂದರು.
ಮುಖ್ಯ ಅಥಿತಿ ಡಿ.ಜಿ.ಎಂ. ಆರ್ಯುದೀಕ್ ಮಹಾವಿದ್ಯಾಲಯದ ಯೋಗ ವಿಭಾಗದ ಪ್ರಾಚಾರ್ಯ ಡಾ. ಎಸ್.ಎಸ್. ಹಿರೇಮಠ ಮಾತನಾಡಿ, ಯೋಗ ಸಾಧನೆಯ ವಿಜ್ಞಾನವೇ ಹೊರತು ಭೋದನೆಯ ವಿಜ್ಞಾನ ಅಲ್ಲ. ಯೋಗ ಅನ್ನುವುದು ಕೂಡಿಸುವುದು ಮತ್ತು ಅನುಭವಿಸುವುದು. ಯೋಗ ದೈಹಿಕ, ಮಾನಸಿಕ, ಸಾಮಾಜಿಕ, ಮತ್ತು ಆಧ್ಯಾತ್ಮಿಕವಾಗಿ ಸದೃಢಗೊಳಿಸುತ್ತದೆ. ಔಷಧ ಇರಲಾರದೇ ಚಿಕಿತ್ಸೆ ಕೊಡುವ ವಿಶ್ವ ವಿಶಿಷ್ಠ ಈ ಯೋಗ ಪದ್ಧತಿ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಕಾರಣ ಯೋಗ, ಆರ್ಯುವೇದ, ಸಂಸ್ಕೃತಿ, ಸಂಪ್ರದಾಯಗಳನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ.
ಜೂನ್ ೨೧ರಂದು ಜಗತ್ತಿನ 196 ರಾಷ್ಟ್ರಗಳು ಒಂದೇ ಸಮಯಕ್ಕೆ ಯೋಗ ಆಯಾಮಗಳನ್ನು ಮಾಡುವದರೊಂದಿಗೆ ಯೋಗ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಆದ್ದರಿಂದ ತಾನು ಮಾತ್ರ ಯೋಗವನ್ನು ರೂಢಿಸಿಕೊಳ್ಳದೇ ನಮ್ಮ ಸುತ್ತಮುತ್ತಲಿನವರಿಗೂ ಸಹ ಯೋಗದ ಮಹತ್ವವನ್ನು ಹೇಳಿ ಆರೋಗ್ಯವಂತ ಸಮಾಜವನ್ನು ಕಟ್ಟಬೇಕಾಗಿದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಶಾಹೀದಬೇಗಂ ಹತ್ತಿವಾಲೆ ಮಹಿಳಾ ಕಾನೂನು ಮತ್ತು ಪೌಷ್ಠಿಕತೆಯ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿ ಸರೋಜಾಕ್ಕನವರು ಆತ್ಮ ಮತ್ತು ಪರಮಾತ್ಮನ ಇರುವಿಕೆಯ ಕುರಿತು ತಿಳಿಸಿದರು. ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಮಿತ್ ಇವರು ತರಬೇತುದಾರ, ಯೋಗ ಸಾಧಕ ಸಿದ್ದಣ್ಣ ಜವಳಿ ಅವರು 30 ವರ್ಷಗಳ ಕಾಲ ಯೋಗ ತರಬೇತಿ ನೀಡಿದ್ದಕ್ಕಾಗಿ `ಯಶಸ್ವಿ ಯೋಗಿ’ ಪ್ರಶಸ್ತಿ ನೀಡಿದ್ದು, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಕವಿತಾ ಬಡಿಗೇರ ಪ್ರಾರ್ಥಿಸಿದರು. ಸಂಗಮೆಶ ತಿಮ್ಮಾಪೂರ ಸ್ವಾಗತಿಸಿದರು. ವಿ.ಸಿ. ಕುಂಬಾರ ನಿರೂಪಿಸಿದರು. ಅನ್ನೇಶ ಕೊಪ್ಪಳ ವಂದಿಸಿದರು.
ಮಾಜಿ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಆಧುನಿಕತೆಯ ಭರದಲ್ಲಿ ಮೊಬೈಲ್ ಮತ್ತು ಟಿ.ವಿ. ತಂತ್ರಜ್ಞಾನದ ಮೊರೆ ಹೋಗಿದ್ದು, ನಮ್ಮ ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಮರೆತಿದ್ದೇವೆ. ಆದ್ದರಿಂದ ನಮ್ಮ ಆರೋಗ್ಯ ಸುಧಾರಣೆಗೆ ಯೋಗವನ್ನು ಅಳವಡಿಸಿಕೊಂಡು ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದು ಅವಶ್ಯವಿದೆ ಎಂದರು.