ಡೆಂಗ್ಯೂ ಜ್ವರವು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ಸಾರ್ವಜನಿಕರು ಡೆಂಗ್ಯೂ ಜ್ವರದ ಕುರಿತು ಭಯ ಹಾಗೂ ಆತಂಕಕ್ಕೆ ಒಳಗಾಗದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೆಂಗ್ಯೂ ಜ್ವರದಿಂದ ಸಂರಕ್ಷಿಸಿಕೊಳ್ಳಬೇಕು. ಡೆಂಗ್ಯೂ ನಿಯಂತ್ರಣಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ. ಜ್ವರ, ರಕ್ತಸ್ರಾವ ಜ್ವರ (ಡಿ.ಎಫ್.ಎಚ್) ಡೆಂಗ್ಯೂ ಶಾಕ್ ಸಿಂಡ್ರೋಮ್ (ಡಿ.ಎಸ್.ಎಸ್) ಸ್ವರೂಪಗಳಲ್ಲಿ ಡೆಂಗ್ಯೂ ರೋಗವನ್ನು ಕಾಣಬಹುದಾಗಿದೆ.
ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಉಂಟಾಗುವುದು ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಜ್ವರದ ಲಕ್ಷಣಗಳೊಂದಿಗೆ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತಸ್ರಾವದ ಗುರುತುಗಳು, ಕಪ್ಪು ಮಲ ವಿಸರ್ಜನೆ, ವಿಪರೀತ ಬಾಯಾರಿಕೆ ಅಥವಾ ಜ್ಞಾನ ತಪ್ಪುವುದು ಇವುಗಳು ಡೆಂಗ್ಯೂ ಶಾಕ್ ಸಿಂಡ್ರೋಮ್‌ನ ಲಕ್ಷಣಗಳಾಗಿವೆ.
ಈಡಿಸ್ ಸೊಳ್ಳೆಗಳು ಮನೆಯಲ್ಲಿರುವ ನೀರು ಶೇಖರಣೆಯ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಮ್‌ಗಳು, ಹೂವಿನ ಕುಂಡ ಮುಂತಾದವುಗಳಲ್ಲದೇ ಮನೆ ಸುತ್ತ ಮುತ್ತ ಬಯಲಲ್ಲಿ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ಕಪ್ಪುಗಳು, ಟೈರ್‌ಗಳು, ಎಳೆನೀರಿನಿಂದ ಚಿಪ್ಪು ಮತ್ತು ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾದಾಗ ಉತ್ಪತ್ತಿಯಾಗುತ್ತವೆ. ಸಾರ್ವಜನಿಕರು ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.
ಯಾವುದೇ ಜ್ವರವಿದ್ದರೂ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಆರೋಗ್ಯ ಸಿಬ್ಬಂದಿಯು ನಿಮ್ಮ ಮನೆಯ ಹತ್ತಿರ ಬಂದಾಗ ಜ್ವರ ಪೀಡಿತರು ರಕ್ತ ಲೇಪನ ಸಂಗ್ರಹಿಸಲು ಸಹಕರಿಸಬೇಕು. ಸೊಳ್ಳೆಗಳ ನಾಶಕ್ಕೆ ಕೀಟನಾಶಕ ಸಿಂಪಡಿಸಲು ಬರುವ ಆರೋಗ್ಯ ಸಿಬ್ಬಂದಿಗೆ ನೆರವಾಗಿ, ಎಲ್ಲ ಕೋಣೆಗಳಿಗೂ ಕೀಟನಾಶಕ ಸಿಂಪಡಿಸಲು ಅವಕಾಶ ನೀಡಬೇಕು. ಕೀಟನಾಶಕ ಸಿಂಪಡಿಸಿದ ನಂತರ ಆರು ವಾರಗಳವರೆಗೆ ಸುಣ್ಣ ಬಣ್ಣವನ್ನು ಗೋಡೆಗಳಿಗೆ ಬಳಿಯಬಾರದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿ ನಾಲೆಗಳಲ್ಲಿ ಕಸಕಡ್ಡಿಗಳನ್ನು ಎಸೆಯದೇ ನೀರಿನ ಸರಾಗವಾದ ಹರಿಯುವಿಕೆಗೆ ತಡೆಯಾಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿರುವ ನೀರು ಸಂಗ್ರಹಣಾ ಪಾತ್ರೆಗಳು ಮತ್ತು ಡ್ರಮ್‌ಗಳನ್ನು ಸರಿಯಾದ ಮುಚ್ಚಳದಿಂದ ಮುಚ್ಚಿ ಹಾಗೂ ದೊಡ್ಡ ತೊಟ್ಟಿಗಳನ್ನು ವಾರಕ್ಕೊಮ್ಮೆ ಸಂಪೂರ್ಣವಾಗಿ ಖಾಲಿ ಮಾಡಿ, ಸರಿಯಾಗಿ ಮುಚ್ಚಿ, ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು.

ಮನೆಯ ಸುತ್ತಮುತ್ತ ಒಡೆದ ಡಬ್ಬ, ಟೈರು, ಎಳೆನೀರಿನ ಚಿಪ್ಪು ಮುಂತಾದ ಸಣ್ಣಸಣ್ಣ ಮೆಳೆ ನೀರು ಸಂಗ್ರಹಣೆಗೆ ಅವಕಾಶವಾಗುವ ಯಾವುದೇ ವಸ್ತುಗಳನ್ನು ಎಸೆಯಬಾರದು. ಸಂಜೆ ಹೊತ್ತಿನಲ್ಲಿ ಆದಷ್ಟು ಮೈ ತುಂಬ ಬಟ್ಟೆ ಹೊದೆಯಿರಿ ಮತ್ತು ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ. ಮನೆಯ ಎಲ್ಲ ಕಿಟಕಿ ಬಾಗಿಲುಗಳೀಗೆ ಕೀಟ ತಡೆಗಟ್ಟುವ ಜಾಲರಿಗಳನ್ನು ಅಳವಡಿಸಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ನೀರಿನ ಬಾವಿ, ಕಾರಂಜಿಗಳು, ಕಟ್ಟಡ ನಿರ್ಮಾಣಕ್ಕಾಗಿ ಸಂಗ್ರಹಿಸಿದ ನೀರು ಶೇಖರಣೆ, ಕೆರೆ, ಕುಂಟೆ ಹೊಂಡ, ಜೌಗು ಪ್ರದೇಶದಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವ ಗ್ಯಾಂಬೂಸಿಯಾ ಮತ್ತು ಗಪ್ಪಿಯೆಂಬ ಲಾರ್ವಾಹಾರಿ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬೇಕು.
ಯಾರು ಎರಡನೇ ಬಾರಿ ಡೆಂಗ್ಯೂ ಬಾಧೆಗೆ ಒಳಗಾಗುತ್ತಾರೆಯೋ ಅವರು ಸ್ವಲ್ಪವೂ ನಿರ್ಲಕ್ಷ್ಯ ಮಾಡಬಾರದು. ಯಾಕೆಂದರೆ ಅದು ತೀವ್ರ ಸ್ವರೂಪಕ್ಕೆ ಹೋಗುವ ಸಾಧ್ಯತೆಗಳು ಅಧಿಕ. ಇಂತಹ ಪ್ರಕರಣಗಳಲ್ಲಿ ಕೆಲವೇ ದಿನಗಳಲ್ಲಿ ಜ್ವರ ನಿಂತುಬಿಡುತ್ತದೆ. ಆದರೆ ಜೀವ ಹೋಗುವಷ್ಟು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

ಉಸಿರಾಟದಲ್ಲಿಯೂ ಏರುಪೇರು ಆಗಬಹುದು. ವಾಂತಿ ಮಾಡಿದಾಗ ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಂಡರೆ ಪರಿಸ್ಥಿತಿ ಗಂಭೀರವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಆಸ್ಪತ್ರೆಗೆ ದಾಖಲಾಗಿ ತಕ್ಕ ಚಿಕಿತ್ಸೆ ಪಡೆಯುವುದು ಉತ್ತಮ ಉಪಾಯವಾಗಿದೆ.
ಲಾರ್ವಾ ಸಮೀಕ್ಷೆ, ಕರಪತ್ರ ವಿತರಣೆ ಮತ್ತು ಖಚಿತಪಟ್ಟ ಗ್ರಾಮಗಳಲ್ಲಿ ಧೂಮೀಕರಣ ಕೈಗೊಳ್ಳಲಾಗಿದೆ. ಅಗಸ್ಟ 2018ರಲ್ಲಿ ಜಿಲ್ಲಾ ಸಮೀಕ್ಷಣಾ ಘಟಕದಲ್ಲಿ ಸೆಂಟಿನಲ್ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ಇದರ ಪ್ರಯೋಜನ ಪಡೆಯಲಾಗಿದೆ. ಪ್ರತಿ ತಿಂಗಳಲ್ಲಿ ಪ್ರತಿ ಉಪಕೇಂದ್ರದ ಗ್ರಾಮಗಳಲ್ಲಿ ಮನೆ ಲಾರ್ವಾ ಸಮೀಕ್ಷೆ ನಡೆಸಿ ಸೋರ್ಸ್ ರಿಡಕ್ಷನ್ ಮಾಡಿಸಲು ಹಾಗೂ ನಗರ ಪ್ರದೇಶಗಳಲ್ಲಿ ಹತ್ತಿರದ ಪ್ರಾ.ಆ. ಕೇಂದ್ರಗಳ ಮುಖಾಂತರ ಲಾರ್ವಾ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ ಎನ್ನುತ್ತಾರೆ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ.
ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬೇಕು. ಸೊಳ್ಳೆಗಳ ಹರಡುವುದನ್ನು ತಡೆದು ಅವುಗಳ ಸಂಭಾವ್ಯ ಸಂತಾನೋತ್ಪತ್ತಿ ಸ್ಥಳಗಳನ್ನು ನಾಶಪಡಿಸಬೇಕು. ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿವೆ. ಆದ್ದರಿಂದ ನಿಂತ ನೀರನ್ನು ತೊಡೆದುಹಾಕಲು ಬ್ಯಾರಲ್‌ಗಳು, ಹೂದಾನಿಗಳು, ಬೇಸಿನ್‌ಗಳು ಅಥವಾ ಕಪ್‌ಗಳು ಮತ್ತು ಬಳಕೆಯಾಗದ ಟಯರ್‌ಗಳು ಸೇರಿದಂತೆ ನಿಂತಿರುವ ನೀರಿನ ಎಲ್ಲ ಮೂಲಗಳನ್ನು ತೆರವುಗೊಳಿಸಿ ಸೊಳ್ಳೆ ನಿವಾರಕಗಳನ್ನು ಬಳಸಿ ಸಾರ್ವಜನಿಕರು ಡೆಂಗ್ಯೂ ನಿಯಂತ್ರಿಸಬೇಕು.
– ವೈಶಾಲಿ ಎಂ.ಎಲ್.
ಜಿಲ್ಲಾಧಿಕಾರಿಗಳು, ಗದಗ.ಅಂಕಿ ಅಂಶಗಳು
ಗದಗ ಜಿಲ್ಲೆಯಲ್ಲಿ 2024ರ ಜುಲೈ 3ರವರೆಗೆ 1294 ಪ್ರಕರಣವನ್ನು ಸಂಶಯಾಸ್ಪದವೆಂದು ಗುರುತಿಸಿ 917 ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಆ ಪೈಕಿ 57 ಜನರಿಗೆ ಡೆಂಗ್ಯೂ ಜ್ವರ ಇದ್ದುದು ಖಚಿತಪಟ್ಟಿದೆ.
ಅವರೆಲ್ಲರೂ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಿದ್ದು, ಮೂರು ಜನರು ಮಾತ್ರ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಾವಾರು ಗದಗ-39, ಮುಂಡರಗಿ-05, ನರಗುಂದ-04, ರೋಣ-03, ಶಿರಹಟ್ಟಿ- 06 ಪ್ರಕರಣಗಳು ಖಚಿತಪಟ್ಟಿವೆ.



