ವಿಜಯಸಾಕ್ಷಿ ಸುದ್ದಿ, ಗದಗ : ರಸ್ತೆಯ ಪಕ್ಕದಲ್ಲಿ ಹತ್ತು ರೂಪಾಯಿ ಬಿದ್ದಿದ್ದರೂ ತೆಗೆದುಕೊಂಡು ಜೇಬಿಗೆ ಇಳಿಸುವ ಇಂದಿನ ದಿನಗಳಲ್ಲಿ `ಪ್ರವಾಸಿ ಮಿತ್ರ’ ಪೊಲೀಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಪ್ರವಾಸಿಗರೊಬ್ಬರು ತಮ್ಮ ಪರ್ಸ್ ಕಳೆದುಕೊಂಡು ಕಂಗಾಲಾಗಿದ್ದರು. ಕೂಡಲೇ ಇದನ್ನು ಅರಿತ ಪ್ರವಾಸಿ ಮಿತ್ರ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರವಾಸಿಗರಿಗೆ ಮರಳಿ ಪರ್ಸ್ ನೀಡಿ ಮಾನವೀಯತೆ ಮೆರೆದ ವಿದ್ಯಮಾನ ಗದಗ ನಗರದಲ್ಲಿ ನಡೆದಿದೆ.
ನಗರದ ಐತಿಹಾಸಿಕ ಭೀಷ್ಮ ಕೆರೆಯ ನಡುಗಡ್ಡೆಯಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿಯ ಹತ್ತಿರ ಪ್ರವಾಸಿಗರೊಬ್ಬರು ತಮ್ಮ ಪರ್ಸ್ ಕಳೆದುಕೊಂಡಿದ್ದರು. ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ `ಪ್ರವಾಸಿ ಮಿತ್ರ’ ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಸಾಳಂಕಿ ಅವರು ಕೂಡಲೇ ಅದನ್ನು ಗಮನಿಸಿ ಮರಳಿ ಪ್ರವಾಸಿಗರಿಗೆ ಹಿಂದಿರುಗಿಸಿದ್ದಾರೆ.
ಬೆಟಗೇರಿಯ ಮಂಜುನಾಥ ನಗರದ ಚೇತನಾ ಎಸ್.ಹವಳದ ಎನ್ನುವರು ತಮ್ಮ ಕುಟುಂಬದೊಂದಿಗೆ ಶ್ರೀ ಬಸವೇಶ್ವರ ಪುತ್ಥಳಿ ವೀಕ್ಷಿಸಲು ಆಗಮಿಸಿದ್ದರು. ಆಗ ಪರ್ಸನ್ನು ಅಲ್ಲೇ ಬಿಟ್ಟು ಹೋಗಿದ್ದರು. ಅದರಲ್ಲಿ 20 ಸಾವಿರ ರೂಪಾಯಿ ನಗದು ಹಣ, ಬೆಲೆ ಬಾಳುವ ಮೊಬೈಲ್ ಹಾಗೂ ಚಿನ್ನಾಭರಣಗಳಿದ್ದವು. ಇದನ್ನು ಗಮನಿಸಿದ ಪ್ರವಾಸಿ ಮಿತ್ರ ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಸಾಳಂಕಿ ಅವರು ಕೂಡಲೇ ಅದನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅವರ ಈ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೆಶ್ ವಿಭೂತಿ ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ ಸಾಳಂಕಿ ಒಳ್ಳೆಯ ಕೆಲಸ ಮಾಡಿದ್ದಾರೆ. ಬೆಲೆಬಾಳುವ ಚಿನ್ನಾಭರಣ, ಮೊಬೈಲ್ ಪೋನ್ ಪ್ರವಾಸಿಗರಿಗೆ ಹಿಂತಿರುಗಿಸಿ ಮಾನವೀಯ ಕೆಲಸ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಅವರಿಗೆ ಅಭಿನಂದನೆಗಳು. ಪ್ರವಾಸಿಗರು ಕೂಡ ತಮ್ಮ ಬೆಲೆಬಾಳುವ ವಸ್ತುಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಪ್ರವಾಸಿಗರು ಎಚ್ಚರಿಕೆ ವಹಿಸಬೇಕು.
– ಬಿ.ಎಸ್. ನೇಮಗೌಡ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಸತತ ಕೆಲಸದ ಒತ್ತಡದ ನಡುವೆ ಸ್ವಲ್ಪ ಬಿಡುವಿನ ಸಮಯ ಕಳೆಯಲು ಶ್ರೀ ಬಸವೇಶ್ವರ ಪುತ್ಥಳಿಯ ಹತ್ತಿರ ಪ್ರವಾಸಕ್ಕೆಂದು ಹೋಗಿದ್ದೆವು. ಈ ವೇಳೆ ನನ್ನ ಪರ್ಸ್ ನ್ನು ಅಲ್ಲೇ ಮರೆತು ಬಂದಿದ್ದೆ. ಇನ್ನೇನು ಕಳೆದೆ ಹೋಯಿತು ಎನ್ನುವ ಚಿಂತೆಯಲ್ಲಿದ್ದೆ. ಆದರೆ, ಪ್ರವಾಸಿ ಮಿತ್ರ ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಸಾಳಂಕಿ ಅವರು ನನಗೆ ಪರ್ಸನ್ನು ಮರಳಿ ನೀಡಿದ್ದಾರೆ. ಇಂತಹ ಸಿಬ್ಬಂದಿ ಗದಗ ನಗರದಲ್ಲಿ ಇರುವುದು ಹೆಮ್ಮೆ ಅನಿಸುತ್ತಿದೆ.
– ಚೇತನಾ ಎಸ್.ಹವಳದ.
ಪರ್ಸ್ ಕಳೆದುಕೊಂಡಿದ್ದ ಮಹಿಳೆ.