ಕಾಂಗ್ರೆಸ್‌ನಿಂದ ಮೋಸದ ರಾಜಕಾರಣ : ಬಸವರಾಜ ಬೊಮ್ಮಾಯಿ

0
The congratulatory ceremony was organized by Shirahatti Mandal
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈಗ ರಾಜ್ಯದಲ್ಲಿರುವದು ರೈತರ, ಮಹಿಳೆಯರ, ವಿದ್ಯಾರ್ಥಿಗಳ ಹಾಗೂ ಜನ ವಿರೋಧಿ ಸರಕಾರವಾಗಿದೆ ಎಂದು ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ನೂತನ ಸಂಸದ ಬಸವರಾಜ ಬೊಮ್ಮಾಯಿ ಕಟುವಾಗಿ ಟೀಕಿಸಿದರು.

Advertisement

ಅವರು ಪಟ್ಟಣದ ರಂಭಾಪುರಿ ಕಲ್ಯಾಣಮಂಟಪದಲ್ಲಿ ಶಿರಹಟ್ಟಿ ಮಂಡಳ ಮುಖಂಡರು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ದುರಾಡಳಿತ ತಾಂಡವವಾಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹಿಂದುಳಿದ ವರ್ಗಗಳ ಮೀಸಲು ಹಣವನ್ನು ಈ ಸರಕಾರ ಕೊಳ್ಳೆ ಹೊಡೆದಿದೆ. ಎಲ್ಲ ಜನತೆಗೆ ಕಾಂಗ್ರೆಸ್ ಸರಕಾರ ಮೋಸ ಮಾಡಿದೆ. ತಮ್ಮ ಸ್ವಾರ್ಥ ರಾಜಕೀಯಕ್ಕೆ, ವೋಟ್ ಬ್ಯಾಂಕ್ ಆಸೆಯಿಂದ ಸರಕಾರ ಮೋಸದ ರಾಜಕಾರಣ ಮಾಡುತ್ತಿದ್ದು, ಜಗತ್ತಿನ ಯಾವುದೇ ದೇಶದಲ್ಲಿ ಸರಕಾರದ ಹಣವನ್ನು ಜನರಿಗೆ ಉಚಿತವಾಗಿ ಹಾಕಿ ಮತ ಕೇಳಿರುವ ನಾಚಿಗೇಡಿನ ಉದಾಹರಣೆ ಇಲ್ಲ.

ರಾಜ್ಯದಲ್ಲಿ ಬರಗಾಲದ ಹಣ ರೈತರಿಗೆ ತಲುಪಿಲ್ಲ, ಗ್ಯಾರಂಟಿ ನೆಪದಲ್ಲಿ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಜನತೆ ಸರಕಾರದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಇದೀಗ ಮತ್ತೆ ಇಂದೇ ಚುನಾವಣೆ ನಡೆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವದು ನಿಶ್ಚಿತ ಎಂದು ಹೇಳಿದರು.

ಈ ಭಾಗದ ಕುಡಿಯುವ ನೀರಿನ ಯೋಜನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶವನ್ನು ಹೊಂದಿದ್ದು, ಜನರಿಗೆ ವರ್ಷದಲ್ಲಿ ಕನಿಷ್ಠ 8-10 ತಿಂಗಳುಗಳ ಕಾಲ ನಿರಂತರವಾಗಿ ನೀರು ದೊರಕುವಂತಾಗಬೇಕು. ಗದಗ-ಯಲವಿಗಿ ರೈಲ್ವೆ ಮಾರ್ಗಕ್ಕೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 640 ಕೋಟಿ ರೂಗಳನ್ನು ಮೀಸಲಿಡಲಾಗಿತ್ತು. ಆದರೆ ಈ ಸರಕಾರ ಬಂದ ಮೇಲೆ ಯೋಜನೆ ಮೂಲೆಗುಂಪಾಗಿದೆ. ಈ ಕುರಿತಂತೆ ರಾಜ್ಯ ಸರಕಾರ ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸುವದಾಗಿ ಹೇಳಿದರು.

ಈಗಾಗಲೇ ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಗದಗ-ಹಾವೇರಿ ಹಾಗೂ ಇನ್ನಿತರ ರಸ್ತೆಗಳನ್ನು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಮನವಿ ಮಾಡಿದ್ದು, ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಶಾಸಕ ಡಾ.ಚಂದ್ರು ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಸಣ್ಣೀರಪ್ಪ ಹಳ್ಳೆಪ್ಪನವರ, ನಾಗರಾಜ ಕುಲಕರ್ಣಿ, ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿದರು.

ಸಭೆಯಲ್ಲಿ ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಫಕ್ಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ಪ್ರವೀಣ ಬಾಳಿಕಾಯಿ, ಭೀಮಸಿಂಗ ರಾಥೋಡ, ವಿಜಯ ಹತ್ತಿಕಾಳ, ಬಸವರಾಜ ಪಲ್ಲೇದ, ಅಶೋಕ ಪಲ್ಲೇದ, ಓಂಪ್ರಕಾಶ ಜೈನ್, ಪೂರ್ಣಾಜಿ ಕರಾಟೆ, ಚಂಬಣ್ಣ ಬಾಳಿಕಾಯಿ, ತಿಮ್ಮರಡ್ಡಿ ಮರಡ್ಡಿ, ತಿಮ್ಮರಡ್ಡಿ ಅಳವಂಡಿ, ಅಶ್ವಿನಿ ಅಂಕಲಕೋಟಿ, ಎಂ.ಎಸ್. ದೊಡ್ಡಗೌಡ್ರ, ಡಿ.ವಾಯ್. ಹುನಗುಂದ, ನವೀನ ಬೆಳ್ಳಟ್ಟಿ, ಸುಭಾಸ ಬಟಗುರ್ಕಿ, ಗಂಗಾಧರ ಮೆಣಸಿನಕಾಯಿ, ರವಿ ದಂಡಿನ, ಹೇಮಗಿರೀಶ ಹಾವಿನಾಳ, ಅಶೋಕಯ್ಯ ಮುಳಗುಂದಮಠ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಹಾಜರಿದ್ದರು. ಕಾರ್ಯದರ್ಶಿ ಅನಿಲ ಮುಳಗುಂದ ನಿರೂಪಿಸಿದರು.

ಚುನಾವಣೆ ಎಂದ ಮೇಲೆ ಕೆಲವೊಂದು ಭಾಗಗಳಲ್ಲಿ ಮತಗಳು ಹೆಚ್ಚು=ಕಡಿಮೆ ಬರುವದು ಸಹಜ. ಮುಖ್ಯಮಂತ್ರಿಯಾಗಿ ಸೇವೆ ನೀಡಿರುವ ನನಗೆ ಸಂಸದನಾಗಿ ಶಕ್ತಿ ತುಂಬಿದ್ದೀರಿ. ಅದಕ್ಕಾಗಿ ಜನತೆಗೆ ಹೃದಯ ತುಂಬಿ ಧನ್ಯವಾದ ಅರ್ಪಿಸುತ್ತೇನೆ. ಜನತೆ ನೀಡಿದ ಈ ಶಕ್ತಿಯನ್ನು ಗುಲಗಂಜಿಯಷ್ಟೂ ನನ್ನ ಸ್ವಂತಕ್ಕೆ ಬಳಸಿಕೊಳ್ಳುವದಿಲ್ಲ.
-ಬಸವರಾಜ ಬೊಮ್ಮಾಯಿ.
ಹಾವೇರಿ-ಗದಗ ಸಂಸದರು.

ನರೇಂದ್ರ ಮೋದಿಯವರು 3ನೇ ಬಾರಿಗೆ ದೇಶದ ಪ್ರಧಾನಿಯಾಗಬೇಕೆಂಬ ಬಹುತೇಕ ಭಾರತೀಯರ ಇಚ್ಛೆ ಈಡೇರಿದೆ. ಮೋದಿಯವರು ದೇಶದ ಅಭಿವೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ. ಎಲ್ಲರನ್ನೂ ಒಂದುಗೂಡಿಸಿ ಮುನ್ನಡೆಯುವುದು ಸುಲಭವಾದ ಮಾತಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಬೇಡಿಕೆಯಿದ್ದು, ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


Spread the love

LEAVE A REPLY

Please enter your comment!
Please enter your name here