ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ ಮಾಡಿರುವ ಬಸವರಾಜ ನರೇಗಲ್ ಹಾಗೂ ಸಾರ್ವಜನಿಕ ಸಂಪರ್ಕ ಸಹಾಯಕ ಹುದ್ದೆಯಿಂದ ಇತ್ತೀಚೆಗೆ ನಿವೃತ್ತಿಗೊಂಡ ಶ್ರೀಕಾಂತ ಬಡಿಗೇರ ಅವರನ್ನು 20ನೇ ವಾರ್ಡಿನ ಸ್ಲಂ ಸಮಿತಿ ಹಾಗೂ ಕ್ಷತ್ರಿಯ ಬ್ರಿಗೇಡ್ ಫೌಂಡೇಶನ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಾಮಾಜಿಕ ಕಾರ್ಯಕರ್ತರಾದ ಕರೀಮಸಾಬ ಸುಣಗಾರ ಮಾತನಾಡಿ, ಎಲ್ಲರೂ ಶಾಶ್ವತ ಸೂರು ಕಂಡುಕೊಳ್ಳಲಿ ಎಂಬ ಉದ್ದೇಶದಿಂದ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಸತಿ ಯೋಜನೆ ಅಡಿಯಲ್ಲಿ ಅಸಂಖ್ಯಾತ ಪಕ್ಕಾ ಮನೆಗಳನ್ನು ನಿರ್ಮಿಸುವ ಮೂಲಕ ಅವರು ಸ್ವಾಭಿಮಾನದ ಬದುಕು ನಿರ್ವಹಿಸುತ್ತಿದ್ದಾರೆ. ಸೂರು ನಿರ್ಮಿಸುವಲ್ಲಿ ಅಗತ್ಯ ಮಾರ್ಗದರ್ಶನ, ಸಲಹೆ-ಸೂಚನೆಯೊಂದಿಗೆ ಅವಿರತ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಕಾಂತ ಬಡಿಗೇರ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕ್ಷತ್ರಿಯ ಬ್ರಿಗೇಡ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಆರ್.ಟಿ. ಕಬಾಡಿ ಮಾತನಾಡಿ, ಗದಗ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರವೀಣ ಎಚ್.ಎಸ್. ಅವರು ಗದಗ ಮತ್ತು ಕೊಪ್ಪಳ ಜಿಲ್ಲೆಯ ಸಹಾಯಕ ಕಾರ್ಯಪಾಲಕರಾಗಿ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಕೊಳಗೇರಿ ಪ್ರದೇಶವಾಸಿಗಳ ಮನಸ್ಸು ಗೆದ್ದಿದ್ದಾರೆ. ಇಂತಹ ದಕ್ಷ ವ್ಯಕ್ತಿತ್ವದ ಅಧಿಕಾರಿಗಳಿರುವದು ಗದಗ ಜಿಲ್ಲೆಯ ಜನತೆಯ ಭಾಗ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಾಬುಸಾಬ ಅಡವಿಸೋಮಾಪೂರ, ಜಂದಿಸಾಬ ಡಾಲಾಯತ್, ಮೌಲಾಸಾಬ ಗಚ್ಚಿ, ಅಭಿಷೇಕ ಪತಂಗೆ, ಶಂಕರ ಮುಳಗುಂದ, ಸುರೇಂದ್ರಸಿಂಗ್ ಕಾಟೇವಾಲ ಸೇರಿದಂತೆ ಹಲವರಿದ್ದರು.