ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಹೃದಯಘಾತದಿಂದ ಅಗಲಿದ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಯ ಸಂಜೆವಾಣಿ ಕನ್ನಡ ದಿನಪತ್ರಿಕೆಯ ವರದಿಗಾರ ಹನುಮಂತಪ್ಪ ಬಂಡಿವಡ್ಡರ್ ಅವರಿಗೆ ನಗರದ ಮುಳಗುಂದ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಶನಿವಾರ ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಎಮ್ ಶರೀಫನವರ, ಕಳೆದ ಹಲವು ವರ್ಷಗಳಿಂದ ಹನುಮಂತಪ್ಪ ಬಂಡಿವಡ್ಡರ್ ಅವರು ಸಂಜೆವಾಣಿ ಪತ್ರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಬಹುತೇಕ ಎಲ್ಲರ ಜೊತೆ ಸ್ನೇಹದಿಂದ ಇರುತ್ತಿದ್ದರು. ಇಂತಹ ವ್ಯಕ್ತಿ ಅತೀ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದು ಬಹಳ ದುಃಖದ ಸಂಗತಿಯಾಗಿದೆ. ಅವರ ಸಾವು ವರದಿಗಾರರಿಗೂ ಹಾಗೂ ಛಾಯಾಗ್ರಾಹಕರಿಗೂ ಒಂದು ದೊಡ್ಡ ಪಾಠವಾಗಬೇಕು. ಒತ್ತಡದ ಕೆಲಸದ ನಡುವೆ ನಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಕೇವಲ 29ರ ವಯಸ್ಸಿನಲ್ಲಿ ಹನುಮಂತಪ್ಪ ಬಂಡಿವಡ್ಡರ ಹೃದಯಘಾತದಿಂದ ಅಗಲಿದ್ದು ಅತೀವ ನೋವಿನ ಸಂಗತಿಯಾಗಿದೆ. ಅವರು ವರದಿಗಾರರಾಗಿ ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದರು. ತಮ್ಮ ಬರವಣಿಗೆಯ ಮೂಲಕ ನರೇಗಲ್ ಹೋಬಳಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಜೊತೆಗೆ, ಸಂಘದ ಎಲ್ಲ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ವ್ಯಕ್ತಿ ನಮ್ನನ್ನು ಅಗಲಿದ್ದು ಅತ್ಯಂತ ದುಃಖದ ಸಂಗತಿಯಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸತೀಶ್ ಬೆಳ್ಳಕ್ಕಿ, ಅರುಣಕುಮಾರ ಹಿರೇಮಠ, ಶರಣು ದೊಡ್ಡೂರ, ಸುಯಮೀಂದ್ರ ಕುಲಕರ್ಣಿ, ರವಿ ಗಿರಣಿ, ಕೌರವ ವರದಿಗಾರ ಲೋಕೇಶ್ ಮಲ್ಲಿಗವಾಡ, ಗಣೇಶ್ ದೊಡ್ಮನಿ ಹಾಗೂ ಪರಸುರಾಮ ಹಳ್ಳದ ಉಪಸ್ಥಿತರಿದ್ದರು.
ಹನುಮಂತಪ್ಪ ಬಂಡಿವಡ್ಡರ ಎಲ್ಲರ ಜೊತೆ ಬೆರೆತು ಒಳ್ಳೆಯ ಸುದ್ದಿ ಪ್ರಚಾರ ಮಾಡಿ ಸಾರ್ವಜನಿಕರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾಡುತ್ತೇವೆ. ಜೊತೆಗೆ ಅವರ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಅವಲೋಕನ ಮಾಡಿ ಸಂಘದಿಂದ ಸಹಾಯ ಮಾಡುವ ಕೆಲಸ ಮಾಡುತ್ತೇವೆ. ಜಿಲ್ಲಾ ಘಟಕದಿಂದ ಖುದ್ದು ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳುವ ಕೆಲಸವನ್ನು ಆದಷ್ಟು ಬೇಗ ಮಾಡುತ್ತೇವೆ. ಅವರ ಸಾವು ನಮಗೂ ಅತೀವ ದುಃಖ ತಂದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಎಮ್ ಶರೀಫನವರ ನುಡಿದರು.