ವಿಜಯಸಾಕ್ಷಿ ಸುದ್ದಿ, ಗದಗ : ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಈ ಸಾಮರ್ಥ್ಯ ಎಲ್ಲ ವಿದ್ಯಾರ್ಥಿಗಳಲ್ಲಿ ಇರುವುದಿಲ್ಲ. ಕಾರಣ ಅವರು ದೈಹಿಕ, ಮಾನಸಿಕವಾಗಿ ಸದೃಢರಾಗಿರುವದಿಲ್ಲ. ವಿದ್ಯಾರ್ಥಿಗಳ ದೇಹ, ಮನಸ್ಸುಗಳು ಸದೃಢವಾಗಿರಲು ಯೋಗ ಸುಲಭೋಪಾಯವಾಗಿದೆ. ಯೋಗದಿಂದ ವಿದ್ಯಾರ್ಥಿಗಳ ದೇಹ ಮನಸ್ಸುಗಳು ಸಶಕ್ತಗೊಂಡು ಅವರಲ್ಲಿ ಆಲೋಚನಾ ಶಕ್ತಿ ಹೆಚ್ಚುವುದು. ಇದರಿಂದ ಅವರು ಒಳ್ಳೆಯದನ್ನು ರೂಢಿಸಿಕೊಳ್ಳುವರು. ಅವರಲ್ಲಿ ಅಭಿರುಚಿ, ಆಸಕ್ತಿ, ಕಲಿಕಾ ಗುಣಾಶಂಗಳು ಬೆಳೆದು ಅಧ್ಯಯನಶೀಲರಾಗುವರು ಎಂದು ತೋಂಟದಾರ್ಯ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ವಿನೋದ ರಾಯ್ಕರ ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದ ತೋಂಟದಾರ್ಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಯೋಗ ತರಬೇತಿ ಶಿಬಿರದ ಪ್ರಾರಂಭೊತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಉತ್ಸಾಹ, ಹುಮ್ಮಸ್ಸು ಹೆಚ್ಚಲೆಂಬ ಉದ್ದೇಶದಿಂದ ಈ ಯೋಗ ತರಬೇತಿ ಶಿಬಿರ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಇಂದು ಯೋಗ ವಿಶ್ವದಾದ್ಯಂತ ಹೆಚ್ಚಿನ ಮಾನ್ಯತೆ ಪಡೆದಿದೆ. ಇಂದಿನ ಕಲುಷಿತ ಪರಿಸರದಲ್ಲಿ ನಾವೆಲ್ಲ ಆರೋಗ್ಯವಂತರಾಗಿರಲು ಯೋಗ ಸಹಾಯಕವಾಗಿದೆ. ವಿದ್ಯಾರ್ಥಿಗಳಿಗಂತೂ ಯೋಗದ ಅವಶ್ಯಕತೆ ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಯೋಗ ತರಬೇತಿ ಶಿಬಿರ ಏರ್ಪಡಿಸಿರುವದು ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಜಿ.ಎಂ. ಶಿವಶಿಂಪರ, ಉಪನ್ಯಾಸಕಿ ಜಿ.ಎಸ್. ದಾದ್ಮೀ, ಯೋಗ ತರಬೇತುದಾರ ಬಸವ ಯೋಗ ಮಹಾವಿದ್ಯಾಲಯದ ಸಹ ಶಿಕ್ಷಕ ಚೇತನ ಚುಂಚಾ ಉಪಸ್ಥಿತರಿದ್ದರು.
ಪ್ರಿಯಾ ಪ್ರಾರ್ಥನೆ ಹೇಳಿದರು. ಉಪನ್ಯಾಸಕಿ ನಂದಾ ಇಟಗಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮೆಕ್ಯಾನಿಕ್ ವಿಭಾಗದ ಮುಖ್ಯಸ್ಥ ಎಂ.ಎಂ. ಉಪ್ಪಿನ ವಂದಿಸಿದರು.