ಗುರಿ ಸಾಧನೆಗೆ ಗುರುವಿನ ಅನುಗ್ರಹ ಬೇಕು : ಡಾ. ಎಸ್.ಕೆ. ನಾಲತ್ವಾಡಮಠ

0
Yogasana Sports Training Camp Inauguration Ceremony
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜೀವನದಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ಗುರಿ ಹೊಂದಿರಬೇಕು. ಆ ಗುರಿ ಸಫಲತೆಗಾಗಿ ಗುರುವನ್ನು ಪಡೆದಿರಬೇಕು. ಕಾರಣ ಗುರವಾದವರು ಸಾಧಕರ ಸಾಧನೆಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಜೊತೆಗೆ ಅವರ ಯಶಸ್ಸಿಗೆ ಶುಭ ಹಾರೈಸುವರು. ಏಕಲವ್ಯನ ಸಾಧನೆ ಗುರು ಕೃಪೆ ಇಲ್ಲದ್ದಕ್ಕೆ ಸಾರ್ಥಕವಾಗಲಿಲ್ಲ. ರಾಮಕೃಷ್ಣ ಪರಮಹಂಸರ ಕೃಪೆಯಿಂದ ವಿವೇಕಾನಂದರು ವಿಶ್ವ ವಿಖ್ಯಾತಿಯಾದರು. ಆದ್ದರಿಂದ ಗುರಿ ಸಾಧನೆಗೆ ಗುರುವಿನ ಅನುಗ್ರಹ ಅಗತ್ಯವಾಗಿದೆ ಎಂದು ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲತ್ವಾಡಮಠ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದವರು ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆಸಿದ `ಅನ್ವೇಷಣೆ’ ಕಾರ್ಯಕ್ರಮದ ಅಂಗವಾಗಿ ನಡೆದ ಸಂಮಾನ ಮತ್ತು ಯೋಗಾಸನ ಕ್ರೀಡಾ ತರಬೇತಿ ಶಿಬಿರ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಂ.ಆರ್. ಬಸವರಡ್ಡಿ ಮಾತನಾಡಿ, ಎಲ್ಲ ಸಾಧನೆಗೆ ನಾವು ಆರೋಗ್ಯದಿಂದಿರಬೇಕು. ಆರೋಗ್ಯದಿಂದಿರಲು ವ್ಯಾಯಾಮ, ಯೋಗ ಸಾಧನೆ ಜೊತೆಯಲ್ಲಿ ಆಹಾರ, ವಿಹಾರಾದಿಗಳ ನಿಯಮಗಳನ್ನು ನಿತ್ಯ ಪಾಲಿಸಬೇಕೆಂದು ಸೂಚಿಸಿದರು.

ಜುಲೈ 27 ಮತ್ತು 28ರಂದು ಕಡೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್‌ಶಿಪ್-2024 ಸ್ಪರ್ಧೆಗಳಲ್ಲಿ ಗದಗ ಜಿಲ್ಲೆಯಿಂದ ಭಾಗವಹಿಸಲಿರುವ ಸ್ಪರ್ಧಿಗಳಿಗೆ ಆಯೋಜಿಸಿದ ಉಚಿತ ಯೋಗಾಸನ ಕ್ರೀಡಾ ತರಬೇತಿ ಶಿಬಿರದ ಪ್ರಾರಂಭೋತ್ಸವವು ಯೋಗ ಕ್ರೀಡಾ ಪಟುಗಳಿಂದ ಯೋಗಾಸನ ಪ್ರದರ್ಶನ ಮೂಲಕ ನೆರವೇರಿತು. ಪ್ರದರ್ಶನದಲ್ಲಿ ಆಕಾಶ ಗುಡ್ಡಿಮಠ, ಪ್ರಶಾಂತ ಗಾಣಿಗೇರ, ಅರುಣಾ ಇಂಗಳಳ್ಳಿ, ಜಯಶ್ರೀ ಡಾವಣಗೇರಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಬಸವಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಹಿರಿಯ ಸದಸ್ಯೆ ಗಿರಿಜಾ ನಾಲತ್ವಾಡಮಠ ಉಪಸ್ಥಿತರಿದ್ದರು. ಸಭೆಯಲ್ಲಿ ಡಾ. ಎಂ.ವಿ. ಐಹೊಳ್ಳಿ, ವೆಂಕಟೇಶ ಜಿತೂರಿ, ಸುನೀಲ ಹಿರೇಮಠ, ಶೋಭಾ ದೊಡ್ಡವಾಡ, ಗೌರಿ ಜಿರಂಕಳಿ, ಸುನಾಂದ ಅರಹುಣಸಿ, ದೀಪಾ ಕುಲಕರ್ಣಿ, ವಿಜಯಲಕ್ಷ್ಮೀ ಮೇಕಳಿ, ಪ್ರೇಮಾ ಗಾಣಿಗೇರ, ಲಲಿತಾ ಕಡಗದ ಮತ್ತು ಯೋಗಾಸನ ಕ್ರೀಡಾಪಟುಗಳು, ಪಾಲಕರು ಪಾಲ್ಗೊಂಡಿದ್ದರು.

ಶಾಂತಾ ಮುಂದಿನಮನಿ ಸ್ವಾಗತಿಸಿದರು. ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿದರು. ಬಸವ ಯೋಗ ಮಹಾವಿದ್ಯಾಲಯದ ಸಹ ಶಿಕ್ಷಕ ಚೇತನ ಚುಂಚಾ ಕಾರ್ಯಕ್ರಮ ನಿರೂಪಿಸಿದರು. ಸುನಂದಾ ಜ್ಯಾನೋಪಂತರ ವಚನ ಮಂಗಲ ಹೇಳಿದರು.

ಶ್ರೀಲಂಕಾದಲ್ಲಿ ನಡೆಯವ ವಿಶ್ವ ಯೋಗ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಲಿರುವ ಶಿವಾನಂದ ಯೋಗ ಕಾಲೇಜು ಪ್ರಾಚಾರ್ಯ ಡಾ. ಎಸ್.ಎಸ್. ಹಿರೇಮಠರನ್ನು ಶುಭ ಹಾರೈಕೆಯೊಂದಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ. ಎಸ್.ಎಸ್. ಹಿರೇಮಠ ಮಾತನಾಡಿ, ಸಾಧನೆ ಎಂಬುದು ಮಹಾತಪಸ್ಸು. ಇದರಲ್ಲಿ ಎಷ್ಟೇ ತಾಪತ್ರಯಗಳು ಬರಲಿ, ಅವುಗಳನ್ನು ಎದುರಿಸಿ ಮುನ್ನಡೆದರೆ ಸಾಧನೆಯ ಸಿದ್ಧಿ ದೊರೆಯುವುದು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here