ವಿಜಯಸಾಕ್ಷಿ ಸುದ್ದಿ, ರೋಣ : ರಾಜ್ಯದಲ್ಲಿ ಆತಂಕ ಮೂಡಿಸಿರುವ ಡೆಂಘೀ ನಿಯಂತ್ರಣಕ್ಕೆ ವೈದ್ಯರು ಹಾಗೂ ಅಧಿಕಾರಿಗಳು ಮೊದಲ ಆದ್ಯತೆಯನ್ನು ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ರವಿವಾರ ಸಂಜೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಪುರಸಭೆಯ ಅಧಿಕಾರಿಗಳೂ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ನಮ್ಮ ತಾಲೂಕಿನಲ್ಲಿ ಡೆಂಘೀ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ ಎಂಬ ಮನೋಭಾವನೆ ಸರಿಯಲ್ಲ. ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಗಳು ಸಹ ಕೈಜೋಡಿಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ವಿಶೇಷವಾಗಿ ಶಹರ ಹಾಗೂ ಗ್ರಾಮೀಣ ಭಾಗಗಳ ಸ್ವಚ್ಛತೆಗೆ ಮೊದಲ ಆದ್ಯತೆ ನಿಡಬೇಕು ಎಂದರು.
ಈಗಾಗಲೇ ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಜನರಲ್ಲಿ ಅರಿವು ಮೂಡಿಸಬೇಕು. ತಮ್ಮ ವಾರ್ಡ್ಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ನೀರನ್ನು ಶೇಖರಿಸುವ ಪಾತ್ರೆಗಳನ್ನು ಶುಚಿಗೊಳಿಸಬೇಕು. ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದರು.
ರಂಗವ್ವ ಭಜಂತ್ರಿ, ಸಂಗನಗೌಡ ಪಾಟೀಲ, ಮುತ್ತಣ್ಣ ಸಂಗಳದ, ಯೂಸುಫ್ ಇಟಗಿ, ಸಂಗಪ್ಪ ಜಿಡ್ಡಿಬಾಗಿಲ್, ದಾವಲಸಾಬ ಬಾಡಿನ, ಆನಂದ ಚಂಗಳಿ, ಸಂಗು ನವಲಗುಂದ, ಅಪ್ಪು ಗಿರಡ್ಡಿ, ಶಿವು ಹುಲ್ಲೂರ, ಮೌನೇಶ ಹಾದಿಮನಿ ಸೇರಿದಂತೆ ಅನೇಕರಿದ್ದರು.
ಶಹರ ಪ್ರದೇಶಗಳಲ್ಲಿ ಪುರಸಭೆ ಮತ್ತು ಗ್ರಾಮೀಣ ಭಾಗಗಳಲ್ಲಿ ಗ್ರಾ.ಪಂಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಡೆಂಘೀ ಜ್ವರದ ಬಗ್ಗೆ ತಿಳುವಳಿಕೆಯನ್ನು ನೀಡುವ ಜೊತೆಗೆ ಆರೋಗ್ಯ ತಪಾಸಣೆ ನಡೆಸಿ ಎಂದು ಸಲಹೆ ನೀಡಿದ ಅವರು, ನಾಗರಿಕ ಸಮುದಾಯ ಅಧಿಕಾರಿಗಳ ಜೊತೆಗೆ ಸ್ಪಂದಿಸಬೇಕು. ಅವರು ಜನರ ಸೇವೆಗಾಗಿ ಹಾಗೂ ಆರೋಗ್ಯದ ರಕ್ಷಣೆಗಾಗಿ ಬಂದಿದ್ದಾರೆ ಎನ್ನುವುದು ನಮಗೆ ಅರಿವಿರಬೇಕು ಎಂದರು.