HomeGadag Newsಆಟಗಳು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ

ಆಟಗಳು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬುದ್ಧಿಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ನೈಪುಣ್ಯತೆ, ಚಾಕಚಕ್ಯತೆಯನ್ನು ಚೆಸ್ ಕ್ರೀಡೆ ಒದಗಿಸುತ್ತದೆ. ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಕ್ರೀಡೆಗಳು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಅದರಲ್ಲೂ ಚೆಸ್ ಕ್ರೀಡೆ ಬುದ್ಧಿಯನ್ನು ಪ್ರಖರಗೊಳಿಸುವ ಉನ್ನತ ಕ್ರೀಡೆಯಾಗಿದೆ ಎಂದು ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ರಾಮರಾವ್ ವೇರ್ಣೆಕರ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ 12, 14 ಮತ್ತು 16 ವರ್ಷದೊಳಗಿನ ಬಾಲಕ, ಬಾಲಕಿಯರಿಗಾಗಿ ಏರ್ಪಡಿಸಿದ್ದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚದುರಂಗ(ಚೆಸ್)ದ ಆಟ ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆ, ಗೆಲ್ಲುವ ಮನೋಭಾವ ಮೂಡಿಸುವ ಜತೆಗೆ ಜ್ಞಾಪಕ ಶಕ್ತಿ ವೃದ್ಧಿಗೆ, ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಮಕ್ಕಳನ್ನು ಬುದ್ಧಿಶಾಲಿಯಾಗಿಸುವ ಈ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಲು ಪಾಲಕರು ಮುಂದಾಗಬೇಕು ಎಂದ ಅವರು, ತಾಲೂಕಿನಲ್ಲಿ ಇಂಥ ಕ್ರೀಡೆಗಳಿಗೆ ತರಬೇತಿ ಮತ್ತು ಅವಕಾಶ ನೀಡುತ್ತಿರುವ ಕಾರ್ಯವನ್ನು ಗದಗ ಜಿಲ್ಲಾ ಚೆಸ್ ಅಸೊಸಿಯೇಷನ್‌ದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಶಿಕ್ಷಕ ಎಂ.ಆಯ್. ಕಣಕೆ ಮಾತನಾಡಿ, ಚೆಸ್‌ನಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿರುವುದರಿಂದ ಅವರ ಬುದ್ಧಿ ಚುರುಕುಗೊಳ್ಳುತ್ತದೆ. ಚೆಸ್ ಆಟ ಬುದ್ಧಿವಂತರ ಆಟವಾಗಿದ್ದು, ಮಕ್ಕಳು ಇದರಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಈ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಗದಗ, ರೋಣ, ಮುಂಡರಗಿ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ಆಯ್ಕೆಯಾದ ಮಕ್ಕಳನ್ನು ಗದಗ ಜಿಲ್ಲಾ ತಂಡವಾಗಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ಚೆಸ್ ಪಂದ್ಯಾವಳಿಗೆ ಎಎಸ್‌ಐ ಎನ್.ಎ. ಮೌಲ್ವಿ ಚಾಲನೆ ನೀಡಿ ಎಲ್ಲರಿಗೂ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಎಸ್.ಎಂ. ಉಮ್ಮಣ್ಣವರ, ಚಂದ್ರಶೇಖರ ದೊಡ್ಡಮನಿ, ಶಿವಯ್ಯ ಕುಲಕರ್ಣಿ, ಯಲ್ಲಮ್ಮ ಇಟಗಿ, ಎನ್.ಜೆ. ಮುಲ್ಲಾ, ನಿರ್ಣಾಯಕರಾಗಿದ್ದ ಮೊರೇ, ಸಂಸ್ಥೆಯ ಪದಾಧಿಕಾರಿಗಳಾದ ಆದೇಶ ಹುಲಗೂರ, ಮಂಜುನಾಥ ಅಂಗಡಿ, ಆರ್.ಎ. ಮುಲ್ಲಾ, ಎ.ಜೆ. ಬೂದಿಹಾಳ, ಎಸ್.ಎಂ. ಪೂಜಾರ ಮುಂತಾದವರಿದ್ದರು. ಎಂ.ಆಯ್. ಕಣಕೆ ಸ್ವಾಗತಿಸಿದರು. ಎಸ್.ಟಿ. ಹೆಬ್ಬಾಳ ನಿರೂಪಿಸಿದರು. ಎಸ್.ಪಿ. ಕಟ್ಟೆಣ್ಣವರ ವಂದಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಗಿರೀಶ ಅಗಡಿ ಮಾತನಾಡಿ, ರಾಜ-ಮಹಾರಾಜರ ಕಾಲದಿಂದಲೂ ಬಹು ಬೇಡಿಕೆಯ ಈ ಆಟ ಮೊಬೈಲ್, ಕಂಪ್ಯೂಟರ್, ಟಿವಿ ಮಾಧ್ಯಮಗಳ ಪ್ರಭಾವದಿಂದ ನಶಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಆದ್ದದಿಂದ ವಿದ್ಯಾರ್ಥಿಗಳು ಈ ಆಟವನ್ನು ಪಠ್ಯ ಶಿಕ್ಷಣದ ಒಂದು ಭಾಗವಾಗಿ ರೂಢಿಸಿಕೊಳ್ಳಬೇಕು. ಚೆಸ್ ಮಕ್ಕಳಲ್ಲಿ ಆತ್ಮವಿಶ್ವಾಸ, ವೈಜ್ಞಾನಿಕ ಮನೋಭಾವ ಮೂಡಿಸುತ್ತದೆ. ಆಟದಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದಾಗ ಬೀಗದೇ ಸೋತಾಗ ಕುಗ್ಗದೆ ಮುಂದೆ ಸಾಗಬೇಕು ಎಂದು ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!