ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಮತ್ತು ಗಜೇಂದ್ರಗಡ ಬಿಹಾರ ಅಥವಾ ಉತ್ತರಪ್ರದೇಶಲ್ಲಿ ಇವೆಯಾ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಕಾರಣ ಎನ್‌ಎ ಆಗದ ಜಮೀನುಗಳನ್ನು ನಿವೇಶನಗಳಾಗಿ ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಪಿಡಿಓಗಳಿಗೆ ನಿರ್ದೇಶನ ನಿಡಬೇಕು ಎಂದು ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದರ ಹೇಳಿದರು.
ಅವರು ಬುಧವಾರ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಕೆಲವರು ಜಮೀನುಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಾರೆ. ವಿಪರ್ಯಾಸವೆಂದರೆ, ಅಲ್ಲಿ ಯಾವುದೇ ರಿತಿಯ ಸೌಲಭ್ಯಗಳಿರುವುದಿಲ್ಲ. ಹಿಗಿದ್ದರೂ ಸಹ ಪಿಡಿಓಗಳು ಸುಮ್ಮನೆ ಇರುವುದು ಉಚಿತವಲ್ಲ. ಹೀಗಾಗಿ, ಪಿಡಿಓಗಳ ಸಭೆಯನ್ನು ಆಯೋಜಿಸಿ ಅವರಿಗೆ ತಿಳುವಳಿಕೆ ನೀಡಿ ಎಂದು ತಾ.ಪಂ ಯೋಜನಾಧಿಕಾರಿ ಎಸ್.ಎಸ್. ನಿಲಗುಂದ ಅವರಿಗೆ ಸೂಚಿಸಿದರು.
ಮುಖ್ಯವಾಗಿ ಎರಡೂ ತಾಲೂಕುಗಳಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಕೆಲ ಶಿಕ್ಷಕರು ಶಾಲೆಗಳಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಮೆಲೆ ಪರಿಣಾಮ ಬೀರುತ್ತದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಾಗೃತಿ ವಹಿಸಬೇಕು. ಅಲ್ಲದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಶೌಚಾಲಯಗಳು ಒಂದೇ ಕಡೆ ಇರುವುದು ಸಮಂಜಸವಲ್ಲ. ಶಾಲಾ ಆವರಣದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಶೌಚಾಲಯ ನಿರ್ಮಿಸಿ ಎಂದ ಅವರು, ವಿದ್ಯಾರ್ಥಿನಿಯರ ಶೌಚಾಲಯಗಳಲ್ಲಿ ಕಿಟಕಿ-ಬಾಗಿಲುಗಳ ರಕ್ಷಣೆ ಅಗತ್ಯವಾಗಿದ್ದು, ನಿರ್ಲಕ್ಷ್ಯ ವಹಿಸಬಾರದು. ಸಾರ್ವಜನಿಕರ ಕೆಲಸಗಳಿಗೆ ವಿಳಂಬ ನೀತಿ ಅನುಸರಣೆಯೂ ಸರಿಯಲ್ಲ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ನಾಗರಾಜ ಕೆ., ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ, ಮಹದೇವಪ್ಪ, ಡಾ. ಬಿ.ಎಸ್. ಭಜಂತ್ರಿ, ಗಿರೀಶ ಹೊಸುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಎಂಜಿಸಿಆರ್‌ವಾಯ್ ಇಲಾಖೆಯವರು ರಸ್ತೆ ಕಾಮಗಾರಿ ಕಳಪೆ ಮಾಡಿದ್ದಾರೆಂದು ಹಾಗೂ ಪಡಿತರ ಚೀಟಿ ಸಮಸ್ಯೆ ಸೇರಿದಂತೆ ಜಮೀನುಗಳಿಗೆ ಸಂಬಂಧಪಟ್ಟ ಒಟ್ಟು 6 ಅರ್ಜಿಗಳು ಸಭೆಯಲ್ಲಿ ಸ್ವೀಕೃತವಾದವು. ತಹಸೀಲ್ದಾರ್ ಕಚೇರಿಯಲ್ಲಿ ಹಾಕಲಾಗಿದ್ದ ಲೋಕಾಯುಕ್ತ ಕಚೇರಿಯ ನಾಮಫಲಕವನ್ನು ಸಿಬ್ಬಂದಿಗಳು ಕಿತ್ತು ಹಾಕಿದ್ದನ್ನು ಕಂಡ ಡಿಎಸ್ಪಿ ವಿಜಯ ಬಿರಾದರ ಕೆಲ ಕ್ಷಣ ಗಲಿಬಿಲಿಗೊಂಡರು. ನಂತರ ಅವರು ಮತ್ತೊಂದು ನಾಮಫಲಕ ಹಾಕಿಸಿ, ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಿ ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.