ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸೋಣ

0
Arrangement of various metaphors about indigenous freedom fighters
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಭಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಅಖಂಡ ಧಾರವಾಡ ಜಿಲ್ಲೆ ಹಾಗೂ ಸುತ್ತಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಶೇಷ ನೃತ್ಯ ರೂಪಕಗಳನ್ನು ಬರುವ ಆಗಸ್ಟ್ 15ರಂದು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

Advertisement

ಬುಧವಾರ ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಜರುಗಿದ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಪ್ರಾಂಶುಪಾಲರ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಹಾಗೂ ಬಿಇಓಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಸ್ವಾತಂತ್ರ್ಯೋತ್ಸವವನ್ನು ವಿನೂತನ, ಅರ್ಥಪೂರ್ಣವಾಗಿ ಆಚರಿಸುವ, ಯುವ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಅರಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಐದಾರು ಸ್ವತಂತ್ರ ಹೋರಾಟಗಳ ಸನ್ನಿವೇಶ ಕುರಿತಾದ ನೃತ್ಯ ಹಾಗೂ ದೃಶ್ಯ ರೂಪಕಗಳನ್ನು ಆಯೋಜಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸ್ಥಳೀಯ ಸ್ವತಂತ್ರ ಹೋರಾಟಗಾರರ ಕುರಿತು ಜಾಗೃತಿ ಮೂಡಿಸುವ ಘಟನೆಗಳು, ವ್ಯಕ್ತಿ ಹೋರಾಟ ಕುರಿತು ನೃತ್ಯ ಅಥವಾ ದೃಶ್ಯ ರೂಪಕಗಳನ್ನು ತಾಲೂಕಾವಾರು ಹಮ್ಮಿಕೊಂಡು, ಆಯ್ಕೆಯಾದ ತಂಡಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ವಿಜೇತರಿಗೆ ಉಸ್ತುವಾರಿ ಸಚಿವರಿಂದ ಬಹುಮಾನ ವಿತರಿಸಲಾಗುವುದೆಂದರು. ಈ ನಿಟ್ಟಿನಲ್ಲಿ ತಾಲೂಕಾ ಮಟ್ಟದ ಬಿಇಓಗಳು ಕಾರ್ಯಪ್ರರ್ವತ್ತರಾಗುವಂತೆ ತಿಳಿಸಿದರು.

ಬಾಲಬಳಗ ಶಾಲೆಯ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಹಿರಿಯ ಕಲಾವಿದರಾದ ಡಾ. ವಿಶ್ವೇಶ್ವರಿ ಹಿರೇಮಠ, ರಂಗಾಯಣ ಕಲಾವಿದ ನದಾಫ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪದವಿಪೂರ್ವ ಕಾಲೇಜಗಳ ಉಪನಿರ್ದೇಶಕ ಸುರೇಶ ವೇದಿಕೆಯಲ್ಲಿದ್ದರು. ವಿವಿಧ ಕಲಾವಿದರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲ ತಾಲೂಕುಗಳ ಬಿಇಓಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ ನರಗುಂದ ಬಂಡಾಯ, ಅದರಗುಂಚಿ ಶಂಕರ ಗೌಡ್ರ, ಅಂದಾನಪ್ಪ ದೊಡ್ಡಮೇಟಿ, ಮೈಲಾರ ಮಹಾದೇವ, ಮುಂಡರಗಿ ಭೀಮರಾಯ ಸೇರಿದಂತೆ ಹಲವರು ಹೋರಾಟದ ಚಳುವಳಿ ಆಧಾರಿತ ರೂಪಕಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಧಾರವಾಡದ ಶಾಲಾ-ಕಾಲೇಜು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಲಾವಿದರ ಸಭೆಯನ್ನು ಜುಲೈ 12ರಂದು ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗುವುದೆಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here