ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮುಗಿದ ಬಳಿಕ ಬಳಗಾನೂರಿನಲ್ಲಿ ಸಚಿವ ಕೆ.ಎಸ್. ಈಶ್ವರಪ್ಪನವರು ಹಾಗೂ ಎಲ್ಲ ಸಮಾಜದ ಹಿರಿಯರೊಂದಿಗೆ ಸೌಹಾರ್ದ ಸಭೆ ಕರೆದು ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರತಿಮೆ ಮತ್ತು ಕಾರ್ಯಕ್ರಮದ ಎಲ್ಲ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಭರವಸೆ ನೀಡಿದ ಮೇರೆಗೆ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಮಗೆ ರಾಯಣ್ಣ ಬೇರೆಯಲ್ಲ, ರಾಣಿ ಚನ್ನಮ್ಮ ಬೇರೆಯಲ್ಲ. ತಾಯಿ-ಮಗನ ಅವಿನಾಭಾವ ಸಂಬಂಧ ಎಂತಹದು ಎಂದು ಇತಿಹಾಸವೇ ಹೇಳುತ್ತದೆ. ಹಾಲುಮತ ಮಹಾಸಭಾದಿಂದ 2015ರಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರು ಹಾಗೂ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಡುವಂತೆ ಒತ್ತಾಯಿಸುತ್ತಿದ್ದೇವೆಯ ಬಳಗಾನೂರಿನಲ್ಲಿ ಸೂಕ್ತ ಸ್ಥಳದಲ್ಲಿ ರಾಣಿ ಚನ್ನಮ್ಮನ ಮೂರ್ತಿ ಸ್ಥಾಪನೆಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಹೇಳಿದರು.
ಸೌಹಾರ್ದ ಕಾಪಾಡಲು ಕಾಗಿನೆಲೆ ಶ್ರೀ ಸಂದೇಶ: ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲು 2017ರಲ್ಲಿ ಬಳಗಾನೂರ ಗ್ರಾ.ಪಂ. ಠರಾವು ಪಾಸ್ ಮಾಡಿದೆ. 2019ರಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಪ್ರತಿಮೆ ಸ್ಥಾಪಿಸಲು ಪರವಾನಿಗೆ ನೀಡಿದ್ದಾರೆ. 2019 ರ ಆಗಸ್ಟ್ 28ರಂದು ದುಷ್ಕರ್ಮಿಗಳು ದಾಳಿ ನಡೆಸಿ, ವೃತ್ತವನ್ನು ತೆರವುಗೊಳಿಸಿದ್ದರು. ಅದೇ ಜಾಗದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ, ಅವರು ವಿಳಂಬ ಧೋರಣೆ ಅನುಸರಿಸಿದ್ದರಿಂದ ಅ. 17 ರಂದು ಯುವಕರು ಉದ್ವೇಗದಲ್ಲಿ ರಾಯಣ್ಣ ಮೂರ್ತಿಯನ್ನು ಸ್ಥಾಪನೆ ಮಾಡಿದ್ದಾರೆ. ಈ ಬಗ್ಗೆ ಕಾಗಿನೆಲೆ ಶ್ರೀಗಳೂ ಸಂದೇಶ ನೀಡಿ, ಎಲ್ಲರೂ ತಮ್ಮ ನೋವುಗಳನ್ನು ಮರೆತು ಸೌಹಾರ್ದಯುತವಾಗಿ ಬದುಕು ಕಟ್ಟಿಕೊಳ್ಳಲು ಕ್ಷಮಾಗುಣ ಅಗತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚರಿವಹಿಸಬೇಕು ಎಂದು ಸಂದೇಶ ನೀಡಿದ್ದಾರೆ ಎಂದು ರುದ್ರಣ್ಣ ಗುಳಿಗುಳಿ ಹೇಳಿದರು.
ಯುವ ಮುಖಂಡ ರವಿ ದಂಡಿನ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸಹಕಾರ ಪಡೆದು, ಸರಕಾರದಿಂದ ಅಧಿಕೃತವಾಗಿ ರಾಯಣ್ಣ ಮೂರ್ತಿಯನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಬಳಗಾನೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಖಣ್ಣ ಅಗಸಿಮನಿ ಮಾತನಾಡಿ, ಸೋಮವಾರ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಪ್ರತಿ?ಪನೆ ಕುರಿತು ಶಾಂತಿ ಸಭೆ ಜರುಗಿದ್ದು, ಎಲ್ಲರೂ ಸಮ್ಮಿತಿ ಸೂಚಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಲ್ಹಾದ ಹೊಸಳ್ಳಿ, ನಿರ್ದೇಶಕಿ ಚೆನ್ನಮ್ಮ ಹುಳಕಣ್ಣವರ, ತಾ.ಪಂ. ಮಾಜಿ ಸದಸ್ಯ ಶೇಖಣ್ಣ ಅಗಸಿಮನಿ, ರಾಘವೇಂದ್ರ ವಗ್ಗನವರ, ಸೋಮನಗೌಡ್ರ ಪಾಟೀಲ, ನಾಗಪ್ಪ ಅಣ್ಣಿಗೇರಿ, ಸುರೇಶ ಗುಲಗಂಜಿ, ಮಹೇಶ ಕೆರಕಲಮಟ್ಟಿ, ಮುತ್ತು ಜಡಿ, ಕುಮಾರ ಮಾರನಬಸರಿ ಉಪಸ್ಥಿತರಿದ್ದರು.
ರಾಯಣ್ಣ ಮೂರ್ತಿ ಸ್ಥಾಪನೆ ಹೋರಾಟಕ್ಕೆ ವಿರಾಮ
Advertisement