ಆಧ್ಯಾತ್ಮಿಕ ಲೋಕದ ನಕ್ಷತ್ರಗಳು

0
Today is the 140th commemoration of Annayya-Tammayya of Jakkali
Spread the love

ಆಧ್ಯಾತ್ಮಕವನ್ನು ತಮ್ಮಲ್ಲಿ ಬೆಳೆಸಿಕೊಂಡು ಆ ಮೂಲಕ ತಮ್ಮನ್ನು ನಂಬಿದ ಭಕ್ತರನ್ನು ಉದ್ಧಾರ ಮಾಡಿದ ಅನೇಕ ಸಾಧು-ಸಂತರಿಗೆ ಈ ಪುಣ್ಯಭೂಮಿ ಭಾರತದಲ್ಲಿ ಕೊರತೆ ಎಂಬುದಿಲ್ಲ. ಅಂತಹ ಅನೇಕ ಸಂತರ ಸಾಲಿನಲ್ಲಿ ನಿಲ್ಲುವವರು ಗದಗ ಜಿಲ್ಲೆ ರೋಣ ತಾಲೂಕಿನ ಅಣ್ಣಯ್ಯ-ತಮ್ಮಯ್ಯ ಶರಣರು.

Advertisement

ಜಕ್ಕಲಿಯಲ್ಲಿ ಕುದರಿ ಎಂಬ ಮನೆತನವೊಂದಿದೆ. ಈ ಮನೆತನದ ಪೂರ್ವಜರು ದೂರದ ಕಲಬುರ್ಗಿ ಜಿಲ್ಲೆಯ ಜಾಲಿಬೆಂಚಿ ಎಂಬ ಗ್ರಾಮದಿಂದ ಕುದುರೆಯನ್ನೇರಿ ಜಕ್ಕಲಿ ಗ್ರಾಮಕ್ಕೆ ಬಂದುದರಿಂದ ಅವರಿಗೆ ಕುದುರೆ ಮನೆತನದವರು ಎಂಬ ಅಡ್ಡ ಹೆಸರು ಶಾಶ್ವತವಾಯಿತು. ಈ ಮನೆತನದವರಿಗೆ ದೊಡ್ಡಮನಿ ಶೆಟ್ಟರು ಎಂಬ ಇನ್ನೊಂದು ಅಡ್ಡ ಹೆಸರೂ ಇದೆ. ಈ ಉಭಯ ಶೆಟ್ಟರ ಸಂಸ್ಮರಣೆಯ 140ನೇ ವರ್ಷದ ಆಚರಣೆಯು ಜುಲೈ 14ರಂದು ಜಕ್ಕಲಿಯ ಅವರ ಮನೆಯಲ್ಲಿ ಜರುಗಲಿದೆ.

ಅಣ್ಣಯ್ಯನವರಿಗಿಂತ ತಮ್ಮಯ್ಯನವರು ಒಂದು ಕೈ ಮೇಲಾಗಿದ್ದರು. ಚಿಕ್ಕ ಮಕ್ಕಳು ಆಡುವ ಕಟ್ಟಿಗೆಯ ಬಸವಣ್ಣನಲ್ಲಿ ಓಂಕಾರವನ್ನು ನಿಡಿಸಿದ ಮಹಮಹಿಮರು ಅವರಾಗಿದ್ದರು. ಒಮ್ಮೆ ಅಣ್ಣಯ್ಯನವರು ತಮ್ಮಯ್ಯನವರಿಗೆ ನಿಡಗುಂದಿ ಗ್ರಾಮದ ವ್ಯಕ್ತಿಗೆ ನೀಡಿದ್ದ ಸಾಲವನ್ನು ವಸೂಲು ಮಾಡಿಕೊಂಡು ಬರಲು ಕಳಿಸಿದ್ದರು. ಆಗ ಅವರು ನೀಡಿದ್ದ ಸಾಲ 20ರೂ.ಗಳು. ಸಾಲವನ್ನು ವಸೂಲು ಮಾಡಲು ಹೋದಾಗ ಅವರ ಮನೆಯಲ್ಲಿ ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದು ಎಂಬ ಷರತ್ತನ್ನು ವಿಧಿಸಿದ್ದರು. ಏಕೆಂದರೆ ಹಾಗೇನಾದರೂ ಸ್ವೀಕರಿಸಿದರೆ ಅವರ ಸಾಲ ಮುಟ್ಟಿದಂತೆಯೇ ಸರಿ ಎಂದೂ ಹೇಳಿ ಕಳಿಸಿದ್ದರು.

ಸಾಲ ವಸೂಲಿಗೆ ಬಂದ ತಮ್ಮಯ್ಯ ಶರಣರನ್ನು ಅತ್ಯಾದರದಿಂದ ಬರಮಾಡಿಕೊಂಡ ಸಾಲ ಪಡೆದವರು ಅವರಿಗೆ ಕುಡಿಯಲು ನೀರು ಕೊಟ್ಟರು. ತಿನ್ನಲು ರೊಟ್ಟಿಯನ್ನು ಕೊಟ್ಟರು. ಅದಕ್ಕೆ ಸ್ವಲ್ಪವೂ ಸೊಪ್ಪು ಹಾಕದ ತಮ್ಮಯ್ಯನವರು ತಮಗೆ 20 ರೂ.ಗಳ ಸಾಲ ಮರು ಪಾವತಿ ಬೇಕೆಂದೂ, ಬೇರೆ ಏನೂ ಬೇಡವೆಂದು ಹೇಳಿದರು.

ನಿಮ್ಮ ಸಾಲವನ್ನು ಮರಳಿ ಕೊಡುತ್ತೇವೆ. ಬಿಸಿಲಿನಲ್ಲಿ ಬಹಳಷ್ಟು ಬಳಲಿ ಬಂದಿರುವಿರಿ. ಇದನ್ನು ಸ್ವೀಕರಿಸಿ ಎಂದು ಒತ್ತಾಯ ಮಾಡಿದರು. ಭಕ್ತರ ಒತ್ತಾಯಕ್ಕೆ ಮಣಿದ ತಮ್ಮಯ್ಯನವರು ಅವರು ನೀಡಿದ ಪ್ರಸಾದ ಮತ್ತು ನೀರನ್ನು ಸ್ವೀಕರಿಸಿದರು. ಅವರ ಊಟದ ನಂತರ ಮನೆಯಾತ 20 ರೂ. ಕೊಡಲು ಬಂದಾಗ ನಿಮ್ಮ ಸಾಲ ಆಗಲೆ ಮುಟ್ಟಿದೆ. ನೀವು ಇನ್ನೇನೂ ಕೊಡುವುದಿಲ್ಲ ಎಂದು ತಮ್ಮಯ್ಯನವರು ಹಣ ಇಸಿದುಕೊಳ್ಳದೆ ನಡೆದುಬಿಟ್ಟರು.

ಹಣ ಪಡೆದವನಿಗೆ ಸಮಾಧಾನವಾಗಲಿಲ್ಲ. ಹಿಂದೆಯೇ ಜಕ್ಕಲಿಗೆ ಬಂದ ಆತ ಹಣ ಪಡೆದುಕೊಳ್ಳಲು ಶೆಟ್ಟರಿಗೆ ಒತ್ತಾಯ ಮಾಡತೊಡಗಿದ. ಇಲ್ಲ ನಿಮ್ಮ ಸಾಲ ಈಗಾಗಲೇ ನಮಗೆ ಮುಟ್ಟಿದೆ. ನಿಮಗೆ ಕೊಡಲೇಬೇಕೆಂಬ ಆಸೆಯಿದ್ದರೆ ಹೇಗೂ ನಿಮ್ಮೂರಲ್ಲಿ ಕೆರೆ ಇಲ್ಲ. ಈ ಹಣವನ್ನು ಮೂಲ ಬಂಡವಾಳವಾಗಿಸಿಕೊಂಡು ಕೆರೆ ನಿರ್ಮಿಸಿ ಎಂದು ಹೇಳಿದರಂತೆ. ಇಷ್ಟೊಂದು ಕರುಣಾಮಯಿ ಮತ್ತು ಮಾತಿಗೆ ತಪ್ಪದ ಶರಣರಾಗಿದ್ದರು ಅಣ್ಣಯ್ಯ-ತಮ್ಮಯ್ಯನವರು.

ಆಗಿನ ಕಾಲದಲ್ಲಿ ಭೀಕರ ಬರ ಅಂದರೆ, ಡೋಗಿ ಬರ ಬಿದ್ದಾಗ ಸುತ್ತಲಿನ ಗ್ರಾಮಗಳ ಜನತೆಗೆ ತಮ್ಮ ಬಣವಿಯಿಂದ ಸಾಕಷ್ಟು ಮೇವನ್ನು ನೀಡಿ ದನಕರುಗಳಿಗೆ ಜೀವದಾನ ಮಾಡಿದ್ದಲ್ಲದೆ, ಹಸಿವಿನಿಂದ ಬಳಲುತ್ತಿದ್ದವರಿಗೆ ಜಕ್ಕಲಿ ಬಸವಣ್ಣನ ಗುಡಿಯ ಅಂಗದಳದಲ್ಲಿ ಒಲೆಗಳನ್ನು ಹೂಡಿ ಜನತೆಗೆ ಅನ್ನದಾನ ಮಾಡಿದ ಮಹಾಮಹಿಮರು ಅಣ್ಣಯ್ಯ-ತಮ್ಮಯ್ಯನವರು. ಮಕ್ಕಳಿಲ್ಲದೆ ಕೊರಗುತ್ತಿದ್ದ ಅಬ್ಬಿಗೆರೆಯ ಭಕ್ತೆಯೊಬ್ಬಳನ್ನಿಗೆ ಅನುಗ್ರಹಿಸಿ, ಅವಳು ಮಗುವನ್ನು ಪಡೆಯುವಂತೆ ಮಾಡುವಲ್ಲಿ ಶರಣರ ಪವಾಡವಿದೆ.

ಅವರ ಪವಾಡಗಳನ್ನು ಓದುತ್ತ ಹೋದಂತೆ ಕೇವಲ 140 ವರ್ಷಗಳ ಹಿಂದೆ ಈ ಭಾಗದಲ್ಲಿದ್ದ ದೊಡ್ಡಮನಿ ಶೆಟ್ಟರು ಮನೆತನದ ಅಣ್ಣಯ್ಯ ತಮ್ಮಯ್ಯನವರು ಮಾಡಿದ ಪುಣ್ಯದ ಕಾರ್ಯಗಳು ಭಕ್ತರ ಮನದಲ್ಲಿ ನಲಿನಲಿದಾಡುತ್ತವೆ. ಜು. 14ರ ರವಿವಾರದಂದು ನಡೆಯುವ ಅಣ್ಣಯ್ಯ-ತಮ್ಮಯ್ಯನವರ 140ನೇ ಪುಣ್ಯ ತಿಥಿಯನ್ನು ಅವರ ಕುಟುಂಬದವರೆಲ್ಲರೂ ಸೇರಿ ಆಚರಿಸುತ್ತಿದ್ದಾರೆ. ಶರಣರಿಗೆ ನಮ್ಮದೂ ಭಕ್ತಿಪೂರ್ವಕ ಪ್ರಣಾಮಗಳು.
-ಅರುಣ ಬಿ. ಕುಲಕರ್ಣಿ.
ನರೇಗಲ್ಲ-ಕೋಡಿಕೊಪ್ಪ.


Spread the love

LEAVE A REPLY

Please enter your comment!
Please enter your name here