ವಿಜಯಸಾಕ್ಷಿ ಸುದ್ದಿ, ಗದಗ : ನಗರದ ದುಂಡಪ್ಪ ಮಾನ್ವಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದಿಂದ ಮುಖ್ಯ ಜಿ.ಪಂ ಕಾರ್ಯನಿರ್ವಾಹಣಾಧಿಕಾರಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಎಚ್.ಎನ್. ರಮೇಶ, ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘ ಆರೋಗ್ಯ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸುಮಾರು 9 ಸಾವಿರ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರವು ಒಂದು ರಾಜಕೀಯ ಸಂಸ್ಥೆಗೆ ಟೆಂಡರ್ ನೀಡಿ ನೌಕರರನ್ನು ಶೋಷಿಸುತ್ತಿದೆ. ರಾಜ್ಯದಲ್ಲಿ ಸುಮಾರು 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡದೇ ಗುತ್ತಿಗೆ ಪದ್ಧತಿಯನ್ನು ಮುಂದುವರಿಸಿದೆ. ಇದರಿಂದ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ದೊರೆಯದೇ ಜೀವನ ಸಾಗಿಸಲು ತೊಂದರೆಯಾಗುತ್ತಿದೆ.
ಹೊರಗುತ್ತಿಗೆದಾರರಿಗೆ ಸರ್ಕಾರದಿಂದ ಯಾವುದೇ ಪಿಂಚಣಿ, ಭವಿಷ್ಯ ನಿಧಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ, ಖಾಸಗಿ ಸಂಸ್ಥೆ ಬದಲಾಗಿ ಸರ್ಕಾರಿ ಸಂಸ್ಥೆ ಅಥವಾ ನಿಗಮ ಮಂಡಳಿ ಮೂಲಕ ವೇತನ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸುವುದು, ಸೇವಾ ಭದ್ರತೆ ನೀಡುವುದು ಇವೇ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಕ್ಷಯ ಡಿ.ಎಮ್. ಗೌಡ, ಶಿವಕುಮಾರ ಆರ್, ಸಿದ್ದಪ್ಪ ಬಿ, ಶ್ರೀಶೈಲ, ಮಂಜುಳಾ, ಸಾವಿತ್ರಿ ಬಿ.ಇಪ್ಪರಗಿ, ರವೀಂದ್ರ ಬಿ., ನವೀನಕುಮಾರ ಬಿ., ಪ್ರವೀಣ ಶಿಗ್ಲಿಯವರ, ಶ್ರೀಶೈಲ ಕರಿಬೀಮಗೋಳ, ಕೇದಾರೇಶ್ವರ ದೊಡ್ಡಮನಿ, ಸುರೇಶ ಜೋಗಿನ, ಕೆ.ಎಚ್. ಅಮೀರಅಲಿ, ರಂಜಾನಸಾಬ ಹಳ್ಯಾಳ, ಶರಣಪ್ಪಗೌಡ ವಿ.ಗೌಡ್ರ, ಗುರುಪಾದಪ್ಪ ಜಿ.ಪಟ್ಟಣಶೆಟ್ಟಿ, ಮಂಜು ಮಡಿವಾಳರ ಆನಂದ ದೊಡ್ಮನಿ, ಹೇಮಣ್ಣ ಪೂಜಾರ ಹಾಗೂ ಸದಸ್ಯರು ಉಪಸ್ಥಿತರಿದ್ದರು.