ನೆಮ್ಮದಿ ನೀಡಿದ ಪುನರ್ವಸು

0
Rest assured
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದ ಮೂರ್ನಾಲ್ಕು ದಿನಗಳಿಂದ ಮೋಡಕವಿದ ವಾತಾವರಣದ ನಡುವೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಕಳೆದೊಂದು ತಿಂಗಳಿಂದ ಮಳೆ ಕೊರತೆಯಿಂದ ಚಿಂತಾಜನಕ ಸ್ಥಿತಿಯಲ್ಲಿರುವ ರೈತ ಸಮುದಾಯಕ್ಕೆ ಪುನರ್ವಸು ಮಳೆ ಕೊನೆ ಚರಣದಲ್ಲಿ ಆಸರೆಯಾಗಿದೆ.

Advertisement

ಆರಿದ್ರ ಮತ್ತು ಪುನರ್ವಸು ಮಳೆಯಾಗದ್ದರಿಂದ ಹೆಸರು, ಹತ್ತಿ, ಶೇಂಗಾ ಬಿತ್ತನೆಯಾಗದೇ ರೈತರು ಚಿಂತೆಗೀಡಾಗಿದ್ದರು. ಇದು ರೈತರ ಜಂಘಾಬಲವನ್ನೇ ಉಡುಗಿಸಿತ್ತು. ಆದರೆ 2 ದಿನಗಳಿಂದ ಮೋಡಕವಿದ ವಾತಾವರಣದ ಜತೆಗೆ ಸುರಿಯುತ್ತಿರುವ ಜಡಿ ಮಳೆ ರೈತರ ಮೊಗದಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ. ಇದೀಗ ಬಹುತೇಕ ರೈತರು ಗೋವಿನಜೋಳ, ಹತ್ತಿ, ಶೇಂಗಾ, ಈರುಳ್ಳಿ ಬೆಳೆಗೆ ರಸಗೊಬ್ಬರ ಹಾಕುತ್ತಿದ್ದಾರೆ. ಆದರೆ ದೊಡ್ಡ ಮಳೆಯಾಗದೇ ಜಿಟಿ ಜಿಟಿ ಮಳೆಯಿಂದ ಮತ್ತು ತಂಪಾದ ವಾತಾವರಣದಿಂದ ಬಹುತೇಕ ಬೆಳೆಗಳಿಗೆ ರೋಗ, ಕೀಟಬಾಧೆ ಆವರಿಸುತ್ತಿದ್ದು, ರೈತರು ಕ್ರಿಮಿನಾಶಕ ಸಿಂಪಡಣೆಗೆ ಹೆಣಗಾಡುತ್ತಿದ್ದಾರೆ.

ಇದೇ ಮಳೆ 15 ದಿನಗಳ ಹಿಂದೆ ಬಂದಿದ್ದರೆ ಮುಂಗಾರಿನ ಹೆಸರು, ಶೇಂಗಾ, ಹತ್ತಿ ಇತರೆ ಬೆಳೆಗಳಿಗೆ ಅನಕೂಲವಾಗುತ್ತಿತ್ತು. ಕೆರೆ, ಕೃಷಿಹೊಂಡ, ಹಳ್ಳ ಮತ್ತು ಬದು-ಬಾಂದಾರಗಳಲ್ಲಿ ನೀರು ಸಂಗ್ರಹವಾಗುವ ದೊಡ್ಡ ಮಳೆಯಾಗಬೇಕು. ಅಂದಾಗ ಮಾತ್ರ ಅಂತರ್ಜಲ ಮಟ್ಟ ಹೆಚ್ಚಳ, ಉತ್ತಮ ಬೆಳೆಯ ನಿರೀಕ್ಷೆ ಮತ್ತು ವರ್ಷಪೂರ್ತಿ ನೀರಿಗಾಗಿ ಪರಿತಪಿಸದೇ ನೆಮ್ಮದಿಯ ನಿಟ್ಟುಸಿರುವ ಬಿಡಬಹುದು ಎಂಬುದು ರೈತ ಸಮುದಾಯದ ಅಭಿಪ್ರಾಯ.

ಶಾಲೆ ಪ್ರಾರಂಭ ಮತ್ತು ಬಿಡುವ ವೇಳೆ ಮಳೆಯ ನಡುವೆಯೂ ಮಕ್ಕಳು, ಶಿಕ್ಷಕರು, ನೌಕಕರು ರೇನ್‌ಕೋಟ್, ಜರ್ಕಿನ್, ಛತ್ರಿ ಹಿಡಿದು ಮನೆ ಸೇರಿದರು. ಪಟ್ಟಣ ಸೇರಿ ತಾಲೂಕಿನ ಯಳವತ್ತಿ, ಯತ್ನಳ್ಳಿ, ಮಾಗಡಿ, ಗೊಜನೂರ, ಅಕ್ಕಿಗುಂದ, ಆದ್ರಳ್ಳಿ, ಬಡ್ನಿ, ಬಟ್ಟೂರ, ಸೂರಣಗಿ, ಹುಲ್ಲೂರ, ಬಾಲೆಹೊಸೂರ, ಶಿಗ್ಲಿ, ದೊಡ್ಡೂರ, ರಾಮಗೇರಿ, ಬಸಾಪುರ, ಅಡರಕಟ್ಟಿ ಸೇರಿ ಎಲ್ಲೆಡೆ ಉತ್ತಮ ಮಳೆಯಾಗಿದೆ.


Spread the love

LEAVE A REPLY

Please enter your comment!
Please enter your name here