ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ರವಿವಾರ ಗದಗ ನಗರದ ವಿವಿಧೆಡೆ ಶ್ರೀ ಸಾಯಿಬಾಬಾ ಅವರ ಜೋಳಿಗೆ ಭಿಕ್ಷಾ ಕಾರ್ಯಕ್ರಮ ಜರುಗಿತು.
ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸತ್ಸಂಗ ಸಮಿತಿಯ ಪದಾಧಿಕಾರಿಗಳು, ಗುರು-ಹಿರಿಯರು ಬಾಬಾ ಅವರಲ್ಲಿ ವಿಶೇಷ ಪ್ರಾರ್ಥನೆ, ಸಂಕಲ್ಪ ಸಲ್ಲಿಸಿ ಜೋಳಿಗೆ ಭಿಕ್ಷಾ ಕೈಂಕರ್ಯ ಆರಂಭಿಸಿದರು.
ಶ್ರೀ ಸಾಯಿಬಾಬಾ ಭಕ್ತಾಧಿಗಳು ಸತ್ಸಂಗದವರನ್ನು ಬರಮಾಡಿಕೊಂಡು ತಮ್ಮ ಸಂಕಲ್ಪ ಇಷ್ಠಾರ್ಥಗಳೊಂದಿಗೆ ಕಾಣಿಕೆ, ಪ್ರಸಾದಕ್ಕೆ ದವಸ-ಧಾನ್ಯ ಪದಾರ್ಥಗಳನ್ನು ಜೋಳಿಗೆಗೆ ಸಮರ್ಪಿಸಿ ಸಂತೃಪ್ತರಾದರು.
ಗದಗ ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿ ದಿನ ಸಂಜೆ 7ರಿಂದ 8 ಗಂಟೆಯವರೆಗೆ ಡಾ. ಎಸ್.ಬಿ. ಶೆಟ್ಟರ ಅವರಿಂದ ಆರಂಭಗೊಂಡಿರುವ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಜುಲೈ 20ರವರೆಗೆ ಜರುಗುವದು.
ಜು. 21ರಂದು ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, ನಂತರ ಬಾಬಾ ಅವರಿಗೆ ಮಂಗಲ ಸ್ನಾನ, ರುದ್ರಾಭಿಷೇಕ, ಅಲಂಕಾರ ಪೂಜೆ. ಮಧ್ಯಾಹ್ನ 12 ಗಂಟೆಗೆ ಪಂಚಾರತಿ ಹಾಗೂ ಸದ್ಭಕ್ತರಿಂದ ಪುಷ್ಪಾರ್ಚನೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸೂರ್ಯಾಸ್ತಕ್ಕೆ ಧೂಪಾರತಿ ನಂತರ ಪಲ್ಲಕ್ಕಿ ಉತ್ಸವ, ರಾತ್ರಿ 10 ಗಂಟೆಗೆ ಶೇಜಾರತಿಯೊಂದಿಗೆ ಕಾರ್ಯಕ್ರಮ ಮಹಾಮಂಗಲಗೊಳ್ಳುವದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.