ಕಾಮಗಾರಿಯ ಕುರಿತು ಮಾಹಿತಿಯೇ ಇಲ್ಲ!

0
BPCL has done the work without drawing the attention of the people's representatives
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಮೂಲಕ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಯೋಜನೆಯ ಕಾಮಗಾರಿಯನ್ನು ಬಿಪಿಸಿಎಲ್ ಆರಂಭಿಸುವ ಮುನ್ನ ಕೇಂದ್ರ ಸರಕಾರದ ಯೋಜನೆಯನ್ನು ಆರಂಭಿಸುವ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ಏಕೆ ತರಲಿಲ್ಲ? ಸ್ವತಃ ತಮಗೂ ಈ ಬಗ್ಗೆ ಮಾಹಿತಿಯೇ ಇಲ್ಲ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ನಗರದ ರಸ್ತೆಗಳನ್ನು ಪುನರ್ ನಿರ್ಮಾಣದ ಜವಾಬ್ದಾರಿ ಯಾರದು ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಪ್ರಶ್ನಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಟ್ಯಾಂತರ ರೂ. ಮೌಲ್ಯದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದು ನಗರಸಭೆ ಅಧ್ಯಕ್ಷರು, ಸದಸ್ಯರು, ಗದಗ ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭೆಯ ಸದಸ್ಯರ ಗಮನಕ್ಕೆ ತಾರದೇ ಗದಗ-ಬೆಟಗೇರಿ ನಗರಸಭೆಯ ಪ್ರಭಾರ ಪೌರಾಯುಕ್ತರೊಬ್ಬರು ಕಾಮಗಾರಿಗೆ ಅನುಮತಿ ನೀಡಿದ್ದು, ಪೌರಾಡಳಿತ ಇಲಾಖೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂದು ವಿಧಾನಪರಿಷತ್ ಕಲಾಪದಲ್ಲಿ ಪ್ರಶ್ನಿಸಿದ್ದಾರೆ.

ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಮೂಲಕ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಕಾಮಗಾರಿಯನ್ನು ಆರಂಭಿಸಿದ್ದು, ನಗರ ಪ್ರದೇಶದಲ್ಲಿ ಪೈಪ್‌ಲೈನ್ ಅಳವಡಿಕೆಗೆ ತೆಗೆದ ತೆಗ್ಗುಗಳು, ರಸ್ತೆ ಹಾನಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಸಾರ್ವಜನಿಕರು ತಮಗೆ ದೂರು ನೀಡುತ್ತಿದ್ದಾರೆ.

ಗದಗ-ಬೆಟಗೇರಿ ನಗರಸಭೆಯ ಅಂದಿನ ಪ್ರಭಾರ ಪೌರಾಯುಕ್ತರು ಯೋಜನೆ ಕುರಿತು ನಗರಸಭೆ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಾರದೇ 7-11-2023ರಂದು ಯೋಜನೆಯ ಅನುಷ್ಠಾನಕ್ಕೆ ಅನುಮತಿ ಕೊಟ್ಟಿದ್ದಾರೆ. ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಅವರಿಗೆ ಒಟ್ಟು 216 ಕಿಮೀ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಲ್ಲಿ ಮೊದಲ ಹಂತದಲ್ಲಿ 61.32 ಕಿಮೀ. ಕಾಮಗಾರಿ ನಡೆಸಲು ಒಪ್ಪಿಗೆ ನೀಡಿದ್ದಾರೆ. ಅದು ನಗರದ ಯಾವ ಭಾಗದಲ್ಲಿ ಎಂಬುದನ್ನೂ ವಿವರಿಸಿಲ್ಲ ಎಂದರು.

ಕೇಂದ್ರ ಸರಕಾರದ ಮಹತ್ವದ ಯೋಜನೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಹಿಂದಿನ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ. ಪಾಟೀಲ ಅವರ ಗಮನಕ್ಕೂ ತಾರದೇ ಒಬ್ಬ ನಗರಸಭೆ ಪ್ರಭಾರ ಪ್ರೌರಾಯುಕ್ತರು ಜಿಲ್ಲಾ ಕೇಂದ್ರ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಿದ್ದು, ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರ ನೀಡಿದ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್, ಶೀಘ್ರದಲ್ಲಿಯೇ ಪೌರಾಡಳಿತ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳ ಸಭೆ ಏರ್ಪಡಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇಂಜಿನಿಯರ್ ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳ ಸಭೆ ನಡೆಸಿ ಯೋಜನೆಯ ವಿವರಗಳನ್ನು ಹಾಗೂ ಯೋಜನೆ ಅನುಷ್ಠಾನದ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here