ವಿಜಯಸಾಕ್ಷಿ ಸುದ್ದಿ, ಗದಗ : ಶಿವಶರಣೆ ಮಹಾಸಾಧ್ವಿ ಹೆಮರಡ್ಡಿ ಮಲ್ಲಮ್ಮ ಕಾಯಕದಿಂದಲೇ ಮುಕ್ತಿ ಎಂಬ ಶರಣ ವಾಣಿಯಂತೆ ಕೃಷಿ ಕಾಯಕದಲ್ಲಿ ಸಾಧನೆಗೈದವರು. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಲ್ಲಮ್ಮನವರು ಕರುಣಾಮಯಿ ಮತ್ತು ದಾಸೋಹಿಯಾಗಿದ್ದರು ಎಂದು ಪೂಜ್ಯ ಚಂದ್ರಶೇಖರ ದೇವರು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2702ನೇ ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಸಾಂಸಾರಿಕ ಜೀವನದಲ್ಲಿ ಎದುರಾದ ಅನೇಕ ಕಷ್ಟದ ಪರಿಸ್ಥಿತಿಗಳನ್ನು ಮೆಟ್ಟಿನಿಂತು ಸಮಾಜೋದ್ಧಾರಕ್ಕೆ ಹಗಲಿರುಳು ಶ್ರಮಿಸಿದ ಮಹಾತಾಯಿ ಮಲ್ಲಮ್ಮನವರ ಜೀವನದ ಆದರ್ಶಗಳು, ಮೌಲ್ಯಗಳು ಅನುಕರಣೀಯ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ. ಶಿವಣ್ಣ ಯರಾಶಿ ಉಪನ್ಯಾಸ ನೀಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಮತ್ತು ಕಾಯಕದಿಂದ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾಳೆ. ಹೇಮರಡ್ಡಿ ಮಲ್ಲಮ್ಮನ ಆದರ್ಶಗಳು, ಜೀವನ ಮೌಲ್ಯಗಳು ಮನುಕುಲಕ್ಕೆ ಮತ್ತು ಇಂದಿನ ಸ್ತ್ರೀಕುಲಕ್ಕೆ ಮಾದರಿಯಾಗಿವೆ ಎಂದರು.
ಸುಪ್ರಸಿದ್ಧ ವಯೋಲಿನ್ ಮತ್ತು ತಬಲಾ ವಾದಕರಾದ ಡಾ. ನಾರಾಯಣ ಹಿರೇಕೊಳಚಿ, ಡಾ. ಗುರುಬಸವ ಮಹಾಮನಿ, ಸುರೇಶ ಮಂಗಳೂರ, ಪಂ. ಶರಣಕುಮಾರ ಗುತ್ತರಗಿ ಅವರ ವಯೋಲಿನ್ ಮತ್ತು ತಬಲಾ ವಾದನ ಜನಮನ ಸೂರೆಗೊಂಡಿತು. ಧರ್ಮಗ್ರಂಥ ಪಠಣವನ್ನು ಪ್ರಶಾಂತ ಶಿವಾನಂದ ಜಡಗೊಂಡ, ವಚನ ಚಿಂತನೆಯನ್ನು ಮಂಜುನಾಥ ಬಸವರಾಜ ಅಸ್ಕಿ ಮಾಡಿದರು. ದಾಸೋಹ ಭಕ್ತಿಸೇವೆ ವಹಿಸಿದ್ದ ಶರಣೆ ಲಿಂ. ಬಸಲಿಂಗಮ್ಮ ಮಲ್ಲಣ್ಣ ದೇಸಾಯಿ ಸುಳ್ಳ ಇವರ ಸ್ಮರಣಾರ್ಥ ಅವರ ಕುಟುಂಬದ ಸದಸ್ಯರನ್ನು ಸಂಮಾನಿಸಲಾಯಿತು.
ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.