ವಿಜಯಸಾಕ್ಷಿ ಸುದ್ದಿ, ಗದಗ : ಪ್ರಕೃತಿಯ ಎಲ್ಲ ಚರಾಚರ ವಸ್ತುಗಳಲ್ಲಿ ಒಂದು ಶಕ್ತಿ ಇರುತ್ತದೆ. ಅದನ್ನು ಗುರುತಿಸಿ, ಪ್ರಕೃತಿದತ್ತ ಕೊಡುಗೆಗಳನ್ನು ನಾವು ಉಪಯೋಗಿಸಿಕೊಂಡರೆ ನಮಗೆ ಅದೆಷ್ಟೋ ಲಾಭಗಳು ದೊರೆಯುತ್ತವೆ. ಹೀಗೆಯೆ ವ್ಯಕ್ತಿಯಲ್ಲಿ, ಮುಖ್ಯವಾಗಿ ಮಕ್ಕಳಲ್ಲಿ ಯಾವುದಾದರೊಂದು ಪ್ರತಿಭೆ ಇದ್ದೇ ಇರುತ್ತದೆ.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ವಿಧಾನಗಳು ಸಾಕಷ್ಟಿದ್ದರೂ ಸ್ಪರ್ಧೆಗಳು ಪ್ರಮುಖವಾಗಿವೆ ಎಂದು ಗದಗ ಲೋಕೋಪಯೋಗಿ ಇಲಾಖೆಯಲ್ಲಿ ಸಾಂಖಿಕ ನಿರೀಕ್ಷಕ ಮಹಾಂತೇಶ ಕರಕಿಕಟ್ಟಿ ಅಭಿಪ್ರಾಯಪಟ್ಟರು.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಇವರು ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆಸಿದ 542ನೇ ಅನ್ವೇಷಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ನಾನೂ ಒಬ್ಬ ಕ್ರೀಡಾಪಟು.
ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳಿಗೆ ಕ್ರೀಡಾ ತರಬೇತಿ ಮತ್ತು ಪ್ರೋತ್ಸಾಹ ದೊರೆತರೆ ಅವರು ಒಲಿಂಪಿಕ್ ಕ್ರೀಡಾಪಟುವಾಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮಿ ಆನೆಹೊಸೂರು, ಯೋಗಾಸನ ಕ್ರೀಡಾ ತರಬೇತುದಾರ ಚೇತನ ಚುಂಚಾ, ನಿವೃತ್ತ ಕೆ.ವಿ.ಜಿ. ಬ್ಯಾಂಕ್ ಅಧಿಕಾರಿ ಎಂ.ಎಂ. ನರವಣಿ ಉಪಸ್ಥಿತರಿದ್ದರು.
ಒಂದು ವಾರ ಕಾಲ ಉಚಿತ ಯೋಗಾಸನ ಕ್ರೀಡಾ ತರಬೇತಿ ಶಿಬಿರ ಸಂಘಟಿಸಿದ ಗದಗ ಜಿಲ್ಲಾ ಯೋಗ ಒಕ್ಕೂಟ ಮತ್ತು ಗದಗ ಜಿಲ್ಲಾ ಅಮೆಚೂರ ಯೋಗಾಸನ ಕ್ರೀಡಾ ಸಂಸ್ಥೆ ಗದಗ ಇವರು ಜುಲೈ 27 ಮತ್ತು 28ರಂದು ಕಡೂರಿನಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್ ಸ್ಪರ್ಧೆಗಳಲ್ಲಿ ಭಾಗವಹಿಸಲಿರುವ ಮತ್ತು ತರಬೇತಿ ಪಡೆದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಸ್ಮರಣಿಕೆಗಳನ್ನು ನೀಡಿದರು.
ಪ್ರಾರಂಭದಲ್ಲಿ ಸುಧಾ ಪಾಟೀಲ ಪ್ರಾರ್ಥಿಸಿದರು. ಯಶವಂತ ಮತ್ತೂರ ಸ್ವಾಗತಿಸಿದರು. ಚೇತನ ಚುಂಚಾ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ಸಜ್ಜನರ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಇತ್ತೀಚೆಗೆ ಯೋಗಾಸನ ಕ್ರೀಡೆಯನ್ನು ಒಲಿಂಪಿಕ್ ಕ್ರೀಡೆಗಳಲ್ಲಿ ಸೇರಿಸುವ ಪ್ರಯತ್ನಗಳು ಉನ್ನತ ಹಂತದಲ್ಲಿ ನಡೆದಿವೆ. ಈಗಾಗಲೇ ಶಾಲೆ-ಕಾಲೇಜು, ವಿಶ್ವವಿದ್ಯಾಲಯ ಮಟ್ಟದಲ್ಲಿ ಯೋಗಾಸನ ಕ್ರೀಡೆಯನ್ನು ಕಡ್ಡಾಯಗೊಳಿಸಲಾಗಿದೆ. ಯೋಗಾಸನ ಕ್ರೀಡೆಯನ್ನು ನಾವೆಲ್ಲರೂ ಪ್ರೋತ್ಸಾಹಿಸಿದರೆ ಪ್ರಚಲಿತದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುವದೆಂದು ತಿಳಿಸಿದರು.