ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗದಗ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯವರು ತಹಸೀಲ್ದಾರ ಕಚೇರಿ ಮತ್ತು ಪುರಸಭೆಗೆ ಆಗಮಿಸಿ ತಾಲೂಕಿನ ಕ್ಷೇತ್ರ ವ್ಯಾಪ್ತಿ, ಬೇಕು-ಬೇಡಿಕೆ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ತಹಸೀಲ್ದಾರ ಕಚೇರಿಗೆ ಆಗಮಿಸಿದ ವೇಳೆ ಅಲ್ಲಿನ ವಿವಿಧ ವಿಭಾಗಗಳ ಕಾರ್ಯವೈಖರಿ ಪರಿಶೀಲಿಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ತಹಸೀಲ್ದಾರ ವಾಸುದೇವ ಸ್ವಾಮಿ ಅವರಿಂದ ಕಂದಾಯ ಇಲಾಖೆಯ ಸಮಗ್ರ ಮಾಹಿತಿ, ತಾಲೂಕಾಡತ ಸೌಧ ನಿರ್ಮಾಣದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿದರು.
ಬಳಿಕ ಪುರಸಭೆಗೆ ಆಗಮಿಸಿ ಪುರಸಭೆಯ ವಿವಿಧ ವಿಭಾಗಗಳ ಕಾರ್ಯದ ವ್ಯವಸ್ಥೆ ಪರಿಶೀಲಿಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿಗಳು ಬರುತ್ತಾರೆಂಬ ಮಾಹಿತಿ ತಿಳಿದು ಸೇರಿದ್ದ ಸಾರ್ವಜನಿಕರು ಪಟ್ಟಣದ ಹತ್ತಾರು ಪ್ರಮುಖ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳೆದುರು ಬಿಚ್ಚಿಟ್ಟರು.
ಪಟ್ಟಣದಲ್ಲಿ ಐದಾರು ವರ್ಷಗಳ ಹಿಂದೆ 40 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಒಳಚರಂಡಿ ಕಾಮಗಾರಿಯಿಂದ ಪಟ್ಟಣದಲ್ಲಿನ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಒಳಚರಂಡಿ ಯೋಜನೆಯೂ ಸಾಕಾರಗೊಳ್ಳದೇ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ನಷ್ಟವಾಗಿದೆ. ತುಂಗಭದ್ರಾ ನದಿಯಿಂದ ಪಟ್ಟಣ ಸೇರಿ ಗ್ರಾಮೀಣ ಭಾಗಕ್ಕೆ ನೀರು ಸರಬರಾಜಾಗುವ ಪೈಪ್‌ಲೈನ್, ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿ ಮಳೆಗಾಲದಲ್ಲೂ 15/20 ದಿನಗಳಿಗೊಮ್ಮೆ ನೀರು ಬರುತ್ತದೆ ಎಂದು ತಿಳಿಸಿದರು.
ಎಲ್ಲವನ್ನೂ ಸಮಾಧಾನಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿಗಳು, ನಗರೋತ್ಥಾನ ಯೋಜನೆ ಕಾಮಗಾರಿಯಲ್ಲಾದ ತೊಂದರೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳುತ್ತೇನೆ.
ಕುಡಿಯುವ ನೀರಿನ ಹೊಸ ಪೈಪ್‌ಲೈನ್ ಅಳವಡಿಕೆಗೆ ಕೆಯುಡಬ್ಲೂಎಸ್‌ನಿಂದ 59 ಕೋಟಿ ರೂ ಕ್ರಿಯಾಯೋಜನೆ ಕಳುಹಿಸಲಾಗಿದೆ. ರಸ್ತೆಯ ಸಮಸ್ಯೆ ಕುರಿತು ಸಾರ್ವಜನಿಕರಿಂದ ಮತ್ತು ಪತ್ರಿಕೆಗಳಲ್ಲಿ ಸಹ ವರದಿಯಾಗಿರುವದನ್ನು ಗಮನಿಸಿದ್ದು, ಈ ಕುರಿತಂತೆ ತುರ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವದು.
ಪುರಸಭೆಗಳಿಗೆ ಮೊದಲೇ ಅನುದಾನ ಕಡಿಮೆ. ತೆರಿಗೆ ಸಂಗ್ರಹ ನಿಧಿಯೇ ಪ್ರಮುಖ ಆದಾಯವಾಗಿರುತ್ತದೆ. ತೆರಿಗೆ ವಸೂಲಿಯಾಗದಿದ್ದರೆ ಅಭಿವೃದ್ಧಿ ಕಾರ್ಯ, ಅಗತ್ಯ ಸೌಲಭ್ಯ ಕಲ್ಪಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಆಸ್ತಿ ತೆರಿಗೆ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಬಗ್ಗೆ ಕಚೇರಿಯಿಂದಲೂ ಆದೇಶ ಹೊರಡಿಸಲಾಗುವದು ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ವೆಂಕಟೇಶ ನಾಯಕ್, ತಹಸೀಲ್ದಾರ ವಾಸುದೇವ ಸ್ವಾಮಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ವೀರೇಂದ್ರಸಿಂಗ್ ಕಾಟೇವಾಲೆ, ಆರ್.ಬಿ. ಅಜ್ಜಣ್ಣವರ, ಮಂಜುನಾಥ ಮುದಗಲ್, ಮಂಜುಳಾ ಹೂಗಾರ, ಸಾರ್ವಜನಿಕರಾದ ಶರಣು ಗೊಡಿ, ಇಸ್ಮಾಯಿಲ್ ಆಡೂರ, ನಾಗೇಶ ಅಮರಾಪೂರ, ಶಂಕರ ಗೋಡಿ, ಆರ್.ಬಿ. ದನದಮನಿ, ಪ್ರಕಾಶ ಮುಳಗುಂದ ಸೇರಿ ಅನೇಕರಿದ್ದರು.
ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ಒಂದೂವರೆ ವರ್ಷದಿಂದ ನಡೆಯುತ್ತಿರುವ 8.50 ಕೋಟಿ ರೂ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಮತ್ತು ಕೆಲವು ಅಪೂರ್ಣ, ಅವೈಜ್ಞಾನಿಕ, ಕಳಪೆಯಾಗಿವೆ. ತಾಲೂಕಾ ಕೇಂದ್ರ ಘೋಷಣೆ ನಾಮಕಾವಸ್ತೆಯಾಗಿದೆ. ಪುರಸಭೆ ಸೇರಿ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ. ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲ. ರಸ್ತೆಗಳು ಸಂಪೂರ್ಣ ಹಾಳಾಗಿವೆ ಹೀಗೆ ಹತ್ತಾರು ಸಮಸ್ಯೆಗಳ ಪಟ್ಟಿಯನ್ನೇ ಸದಸ್ಯರಾದ ಸಿಕಂದರ ಕಣಿಕೆ, ಫಿರ್ಧೋಸ ಆಡೂರ, ಸಂಘಟನೆಗಳ ಮುಖಂಡರಾದ ಶರಣು ಗೋಡಿ, ನಾಗೇಶ ಅಮರಾಪುರ ಬಿಚ್ಚಿಟ್ಟರು.