ಡೆಂಘೀ ಮುನ್ನೆಚ್ಚರಿಕೆಯಿರಲಿ : ಗೋವಿಂದರೆಡ್ಡಿ

0
Collector Govindarreddy launched the larva survey campaign
Spread the love

ವಿಜಯಸಾಕ್ಷಿ ಸುದ್ದಿ, ಗದಗ : ದಿನದಿಂದ ದಿನಕ್ಕೆ ಡೆಂಘೀ ಹರಡುವಿಕೆಯ ಪ್ರಮಾಣ ಅಧಿಕವಾಗುತ್ತಿದ್ದು, ಡೆಂಘೀ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವ ಮೂಲಕ ಡೆಂಘೀ ನಿಯಂತ್ರಣಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

Advertisement

ನಗರದ ತ್ರಿಕೂಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗದಗ ಶಹರ ಲಾರ್ವಾ ಸಮೀಕ್ಷಾ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಜ್ವರವಿದ್ದರೂ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಆರೋಗ್ಯ ಸಿಬ್ಬಂದಿಯು ನಿಮ್ಮ ಮನೆಯ ಹತ್ತಿರ ಬಂದಾಗ ಜ್ವರ ಪೀಡಿತರು ರಕ್ತ ಲೇಪನ ಸಂಗ್ರಹಿಸಲು ಸಹಕರಿಸಬೇಕು. ಕೀಟನಾಶಕ ಸಿಂಪಡಿಸಲು ಬರುವ ಆರೋಗ್ಯ ಸಿಬ್ಬಂದಿಗೆ ನೆರವಾಗಿ, ಎಲ್ಲ ಕೋಣೆಗಳಿಗೂ ಕೀಟನಾಶಕ ಸಿಂಪಡಿಸಲು ಅವಕಾಶ ನೀಡಬೇಕು. ಕೀಟನಾಶಕ ಸಿಂಪಡಿಸಿದ ನಂತರ ಆರು ವಾರಗಳವರೆಗೆ ಸುಣ್ಣ-ಬಣ್ಣವನ್ನು ಗೋಡೆಗಳಿಗೆ ಬಳಿಯಬಾರದು.

ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿ ನಾಲೆಗಳಲ್ಲಿ ಕಸಕಡ್ಡಿಗಳನ್ನು ಎಸೆಯದೇ ನೀರಿನ ಸರಾಗವಾದ ಹರಿಯುವಿಕೆಗೆ ತಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ, ಈಡಿಸ್ ಸೊಳ್ಳೆಗಳು ಮನೆಯಲ್ಲಿರುವ ನೀರು ಶೇಖರಣೆಯ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಮ್‌ಗಳು, ಹೂವಿನ ಕುಂಡ ಮುಂತಾದವುಗಳಲ್ಲದೇ ಮನೆ ಸುತ್ತ ಮುತ್ತ ಬಯಲಲ್ಲಿ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ಕಪ್ಪುಗಳು, ಟೈರ್‌ಗಳು ಮತ್ತಿತರ ವಸ್ತುಗಳಲ್ಲಿ ನೀರು ಸಂಗ್ರಹವಾದಾಗ ಉತ್ಪತ್ತಿಯಾಗುತ್ತವೆ. ಅವುಗಳ ಸಂಪುರ್ಣ ನಾಶ ಮಾಡುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಮಾತನಾಡಿ, ಗದಗ ಜಿಲ್ಲೆಯಲ್ಲಿ 2024ರ ಜುಲೈ 19ವರವರೆಗೆ 1750 ಪ್ರಕರಣವನ್ನು ಸಂಶಯಾಸ್ಪದವೆಂದು ಗುರುತಿಸಿ, 1373 ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಆ ಪೈಕಿ 117 ಜನರಿಗೆ ಡೆಂಘೀ ಜ್ವರ ಇದ್ದುದು ಖಚಿತಪಟ್ಟಿದೆ. 21 ಜನರು ಜಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ 4 ಜನರು ಐಸಿಯುದಲ್ಲಿದ್ದಾರೆ. 12 ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಮೀನಾಕ್ಷಿ, ಡಾ. ವೈ.ಕೆ. ಭಜಂತ್ರಿ, ಡಾ. ಮಹೇಶ ಕೊಪ್ಪಳ, ಪ್ರಮುಖರಾದ ಸುಧೀರ ಕಾಟಿಗೇರ, ಕೀಟಶಾಸ್ತçಜ್ಞರಾದ ಅನ್ನಪೂರ್ಣ ಶೆಟ್ಟರ್, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿಗಳು, ಗದಗ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಮನೆಯಲ್ಲಿರುವ ನೀರು ಸಂಗ್ರಹಣಾ ಪಾತ್ರೆಗಳು ಮತ್ತು ಡ್ರಮ್‌ಗಳನ್ನು ಸರಿಯಾದ ಮುಚ್ಚಳದಿಂದ ಮುಚ್ಚಿ ಹಾಗೂ ದೊಡ್ಡ ತೊಟ್ಟಿಗಳನ್ನು ವಾರಕ್ಕೊಮ್ಮೆ ಸಂಪೂರ್ಣವಾಗಿ ಖಾಲಿ ಮಾಡಿ, ಸರಿಯಾಗಿ ಮುಚ್ಚಿ. ಮನೆಯ ಎಲ್ಲ ಕಿಟಕಿಗಳಿಗೆ ಜಾಲರಿಗಳನ್ನು ಅಳವಡಿಸಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಸೊಳ್ಳೆ ಮರಿಗಳನ್ನು ತಿನ್ನುವ ಗ್ಯಾಂಬೂಸಿಯಾ ಮತ್ತು ಗಪ್ಪಿಯೆಂಬ ಲಾರ್ವಾಹಾರಿ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬೇಕು ಎಂದರು.

ಪ್ರಸಕ್ತ ವರ್ಷದಲ್ಲಿ ಡೆಂಘೀ ಕಾಯಿಲೆ ಅಧಿಕವಾಗಿದ್ದು, ಲಾರ್ವಾ ಸಮೀಕ್ಷೆ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಅಲ್ಲದೇ ಲಾರ್ವಾ ಸಮೀಕ್ಷೆ ವೇಳೆ ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸೊಳ್ಳೆಗಳ ಉತ್ಪತ್ತಿ ತಾಣಗಳ ಬಗ್ಗೆ ಮಾಹಿತಿ ನೀಡಿ ಅವುಗಳನ್ನು ಸಂಪೂರ್ಣ ನಾಶಪಡಿಸುವ ವಿಧಾನವನ್ನೂ ತಿಳಿಸಿಕೊಡಬೇಕು.
– ಗೋವಿಂದರೆಡ್ಡಿ.
ಗದಗ ಜಿಲ್ಲಾಧಿಕಾರಿಗಳು.

 


Spread the love

LEAVE A REPLY

Please enter your comment!
Please enter your name here