ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಪಿಎಲ್ ಹಾಗೂ ಸ್ತ್ರೀ ಪ್ರಧಾನ ಕುಟುಂಬಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಕಲ್ಲೇಶ ಹೇಳಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಚಾರ ಸಾಮಗ್ರಿ ಹಾಗೂ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅರ್ಜಿ ಸಲ್ಲಿಸಿ: ಜಿಲ್ಲೆಯ ಗ್ರಾಮೀಣ ಭಾಗದ ಲಕ್ಷಾಂತರ ಬಡ ವರ್ಗದ ಜನರು ಮನರೇಗಾ ಯೋಜನೆಯಲ್ಲಿ ಕಾರ್ಯನಿರ್ವಹಿಸಿ ನೂರಾರು ಆಸ್ತಿಗಳನ್ನು ಸೃಜನೆ ಮಾಡಿದ್ದಾರೆ. ಇದರಿಂದ ಆಯಾ ಕಟುಂಬದವರ ಆರ್ಥಿಕ ಸ್ಥಿತಿಯು ಸುಧಾರಣೆಯಾಗಿದೆ. ನರೇಗಾ ಯೋಜನೆ ಅಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ರೈತರ ಕ್ರಿಯಾ ಯೋಜನೆ ಅಭಿಯಾನ ಆರಂಭಿಸಲಾಗಿದೆ. ಬಚ್ಚಲು ಗುಂಡಿ ನಿರ್ಮಾಣ, ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಕೃಷಿ ಅರಣ್ಯ, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ, ಜಾನುವಾರು ಶೆಡ್ ನಿರ್ಮಾಣ ಸೇರಿ ಇತರ ಹಲವು ಕಾಮಗಾರಿ ಮಾಡಿಕೊಳ್ಳಲು ಅನುದಾನ ನೀಡಲಾಗುತ್ತಿದೆ. ರೈತ ಕಾರ್ಮಿಕರು ಗ್ರಾ.ಪಂ.ಗಳಲ್ಲಿ ಇಡಲಾಗಿರುವ ಬೇಡಿಕೆ ಪೆಟ್ಟಿಗೆಯಲ್ಲಿ ತಮಗೆ ಅಗತ್ಯವಾಗಿರುವ ಕಾಮಗಾರಿಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲ ಹಂತದ ನರೇಗಾ ಸಿಬ್ಬಂದಿ ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸೋಕ್ ಪಿಟ್ ಅಭಿಯಾನ ಯಶಸ್ವಿಗೊಳಿಸಲು ತಾ.ಪಂ. ಹಾಗೂ ಗ್ರಾ.ಪಂ. ಸಿಬ್ಬಂದಿ ಶ್ರಮಿಸಬೇಕು ಎಂದರು.
ನರೇಗಾ ಯೋಜನೆಯ ಎಡಿಪಿಸಿ ಮಂಜುನಾಥ್ ಮಾತನಾಡಿ, ರೈತರ ಕ್ರಿಯಾ ಯೋಜನೆ ಅಭಿಯಾನ ಉತ್ತಮವಾಗಿ ಸಾಗುತ್ತಿದೆ. ಜಿಲ್ಲೆಯಲ್ಲಿ ೩೯೫೦ಕ್ಕೂ ಹೆಚ್ಚು ಫಲಾನುಭವಿಗಳು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಜಿ.ಪಂ. ವ್ಯವಸ್ಥಾಪಕ ಎಸ್.ಆರ್. ಪೂಜಾರ, ನರೇಗಾ ಯೋಜನೆ ಕಾರ್ಯಕ್ರಮ ನಿರ್ವಾಹಕರಾದ ಶಿವಾನಂದ ನಸಭಿ, ಡಿಎಂಐಎಸ್ ಅಶೋಕ ಇನಾಮತಿ, ತಾಲೂಕು ಮಟ್ಟದ ಐಇಸಿ ಸಂಯೋಜಕರಾದ ವೀರೇಶ ಪಟ್ಟಣಶೆಟ್ಟಿ, ಪ್ರಕಾಶ ಅಂಬಕ್ಕಿ, ಮಂಜುನಾಥ ಯಾವಗಲ್ಲ, ರಾಕೇಶ ದೊಡ್ಡಮನಿ, ಸಾಗರ ಅಗಸಿಮನಿ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಇದ್ದರು.
ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಮೂಡಿಸಿ
Advertisement