ಬೆಂಗಳೂರು: ಎನ್ ಡಿಎ ಸರ್ಕಾರ ಉಳಿಸಿಕೊಳ್ಳಲು ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಇದಾಗಿದೆ. ಕರ್ನಾಟಕಕ್ಕೆ ಯಾವುದೇ ನೆರವು ನೀಡದೆ ಅವರ ಮೇಲಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ನಮ್ಮ ರಾಜ್ಯಕ್ಕೆ ಯಾವುದೇ ನೆರವು ಇಲ್ಲ. ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ದೇಶವನ್ನು ಒಂದಾಗಿ ನೋಡಿಲ್ಲ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕಡೆಗಣಿಸಿದ್ದಾರೆ. ಇದು ಕೇವಲ ಬಿಜೆಪಿ ಹಾಗೂ ಎನ್ ಡಿಎ ಮೈತ್ರಿಕೂಟ ಪಕ್ಷಗಳ ಆಡಳಿತ ರಾಜ್ಯಗಳಿಗೆ ನೆರವು ನೀಡುವ ಬಜೆಟ್ ಆಗಿದೆ. ಈ ಬಜೆಟ್ ನಲ್ಲಿ ತಾರತಮ್ಯ ಹೆಚ್ಚಾಗಿದೆ. ಇದು ಖಂಡನೀಯ ಎಂದು ಕಿಡಿಕಾರಿದರು.



