ಮಹಿಳಾ ಏಷ್ಯಾಕಪ್ 2024 ರ 10 ನೇ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನೇಪಾಳ ತಂಡವನ್ನು ರನ್ಗಳಿಂದ ಮಣಿಸಿ ಅಜೇಯ ತಂಡವಾಗಿ ಸೆಮಿಫೈನಲ್ ಸುತ್ತಿಗೆ ಎಂಟ್ರಿಕೊಟ್ಟಿದೆ. ಶ್ರೀಲಂಕಾದ ರಂಗಿ ದಂಬುಲ್ಲಾ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಆರಂಭಿಕ ಆಟಗಾರ್ತಿಯಾದ ದಯಾಳನ್ ಹೇಮಲತಾ ಮತ್ತು ಶಫಾಲಿ ವರ್ಮಾ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿದರು. ಉಭಯ ಆಟಗಾರ್ತಿಯರ ಈ ಬ್ಯಾಟಿಂಗ್ ಪೈಪೋಟಿಯಿಂದಾಗಿ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಈ ಜೋಡಿ ಬರೋಬ್ಬರಿ 122 ರನ್ ಒಟ್ಟುಗೂಡಿಸಿತು. ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಹೇಮಲತಾ 47 ರನ್ ಗಳಿಸಿದ್ದ ವೇಳೆ ವಿಕೆಟ್ ಕೈಚೆಲ್ಲಿದರು. ಕೇವಲ 3 ರನ್ ಅಂತೆದಿಂದ ಅರ್ಧಶತಕ ತಪ್ಪಿಸಿಕೊಂಡರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ದಾಖಲಾಯಿತು.
ಜತೆಗಾರ್ತಿ ಹೇಮಲತಾ ವಿಕೆಟ್ ಬಿದ್ದರೂ ಕೂಡ ಶಫಾಲಿ ಬ್ಯಾಟಿಂಗ್ ಆರ್ಭಟಕ್ಕೇನು ಅಡ್ಡಿಯಾಗಲಿಲ್ಲ. ಅವರು ಮುನ್ನುಗ್ಗಿ ಬಾರಿಸುತ್ತಲೇ ಇದ್ದರು. ಕೇವಲ 26 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಇದು ಅವರ 10ನೇ ಟಿ20 ಅರ್ಧಶತಕ. ಇನ್ನೇನು ಶತಕ ಬಾರಿಸುತ್ತಾರೆ ಎನ್ನುವಷ್ಟರಲ್ಲಿ ಅವಸರ ಮಾಡಿಕೊಂಡು ಸ್ಟಂಪ್ಡ್ ಆಗಿ ವಿಕೆಟ್ ಕಳೆದುಕೊಂಡರು. 48 ಎಸೆತ ಎದುರಿಸಿದ ಶಫಾಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 81 ರನ್ ಬಾರಿಸಿದರು. ಇದೇ ವೇಳೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪರ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡರು. ದಾಖಲೆ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಹೆಸರಿನಲ್ಲಿದೆ. ಮಿಥಾಲಿ 2018 ರಲ್ಲಿ ಮಲೇಷ್ಯಾ ವಿರುದ್ಧ ಅಜೇಯ 97 ರನ್ ಬಾರಿಸಿದ್ದರು. 2022 ರಲ್ಲಿ ಶ್ರೀಲಂಕಾ ವಿರುದ್ಧ 76 ರನ್ ಬಾರಿಸಿದ್ದ ಜೆಮಿಮಾ ರಾಡ್ರಿಗಸ್ ದಾಖಲೆ ಪತನಗೊಂಡಿತು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಿದ ದಾಖಲೆಯನ್ನೂ ಕೂಡ ಶಫಾಲಿ ಈ ಪಂದ್ಯದಲ್ಲಿ ನಿರ್ಮಿಸಿದರು.
ಲೀಗ್ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಒಂದು ಪಂದ್ಯದಲ್ಲಿ ಸೋಲು ಕಂಡಿದೆ.