ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಒಂದು ಕಡೆ ಕಣ್ಣೀರು ಹಾಕುತ್ತಾ, ತನ್ನ ನೋವನ್ನು ತೋಡಿಕೊಳ್ಳುತ್ತಿರುವ ವ್ಯಕ್ತಿ. ಆತನ ಕಣ್ಣ ಮುಂದೆ ಮನೆಯೊಳಗೆ ನೀರು ತುಂಬಿ, ಕಸ ಬೆಳೆದಿರುವ ದೃಶ್ಯ.
ರಾಜ್ಯದಲ್ಲಿ ವರುಣನ ಆರ್ಭಟ ಮೇರೆ ಮೀರಿದ ಹಿನ್ನೆಲೆಯಲ್ಲಿ ಅಸಂಖ್ಯ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗೆ ಅಪಾರ ಹಾನಿ ಅನುಭವಿಸಿದ್ದಾರೆ. ಗದಗ ಜಿಲ್ಲೆಯಲ್ಲೂ ಮಳೆರಾಯ ಅಬ್ಬರಿಸಿದ್ದಾನೆ. ಹಲವರು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ತಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ಮೊರೆಯಿಡುತ್ತಿದ್ದಾರೆ.
ವರ್ಷವಾದರೂ ಪರಿಹಾರವಿಲ್ಲ: ಈ ಕುಟುಂಬದ ಸ್ಥಿತಿ ಇನ್ನೂ ಹತಾಶವಾಗಿದೆ. 2019 ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಆವರಿಸಿದಾಗ ಮನೆ- ಮಠ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿತ್ತು. ತಮ್ಮ ಕ್ಷೇತ್ರದಲ್ಲಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಯ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೂ ಸೂಚಿಸಿತ್ತು. ಆದರೆ, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾ.ಪಂ. ಅಧಿಕಾರಿಗಳಿಗೆ ಈ ಆದೇಶ ತಲುಪಿಲ್ಲವೋ, ಅಥವಾ ಅದರ ಅರಿವಿಲ್ಲವೋ ಅಥವಾ ನಿರ್ಲಕ್ಷ್ಯವೋ ತಿಳಿಯದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
2019 ರಲ್ಲಿ ಪ್ರಕೃತಿ ವಿಕೋಪಕ್ಕೆ ಜುಬೇದಾ ಶಿರಬಡಗಿ ಎಂಬುವರ ಮನೆ ನೆಲಸಮವಾಗಿ ಕುಟುಂಬ ಬೀದಿಗೆ ಬಂದಿದೆ. ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಈ ಕುಟುಂಬ ಗ್ರಾ.ಪಂ.ಗೆ ಹಲವು ಬಾರಿ ಮನವಿಯನ್ನೂ ಸಲ್ಲಿಸಿತ್ತು. ಒಂದು ವರ್ಷ ಕಳೆದರೂ ಇವರಿಗೆ ಬಿಡಿಗಾಸು ಪರಿಹಾರ ದೊರೆಯಲಿಲ್ಲ. ಈ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ ಗ್ರಾ.ಪಂ. ಮುಂದೆ ಪ್ರತಿಭಟಿಸುವುದೊಂದೇ ತಮಗುಳಿದಿರುವ ಮಾರ್ಗ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ.
ಮಳೆ ಇಲ್ಲದ ಸಂದರ್ಭದಲ್ಲಿ ಈ ಕುಟುಂಬ ಮನೆಯ ಅವಶೇಷಗಳಲ್ಲೇ ಕಾಲ ಕಳೆಯುತ್ತಿದೆ. ಮಳೆ ಬಂದಾಗ ಅಕ್ಕ-ಪಕ್ಕದ ಕಟ್ಟಡಗಳಲ್ಲಿ ಆಶ್ರಯ ಪಡೆಯುತ್ತಿದೆ. ಈ ಬಾರಿ ಮಳೆಗೆ ಈ ಕಟ್ಟಡ ಬಹುತೇಕ ನೆಲಸಮವಾಗಿದೆ.
ನಮ್ದು ಬಡ ಕುಟುಂಬ. ಒಂದು ಹೊತ್ತಿನ ಊಟ ಮಾಡಬೇಕೆಂದ್ರೂ ಇನ್ನೊಬ್ಬರ ಬಳಿ ದುಡಿಬೇಕು. ಅಂದಾಗ ಮಾತ್ರ ನಾವು ಹೊಟ್ಟೆ ತುಂಬ ಊಟ ಮಾಡ್ತೇವಿ. ಇಂತಹ ಸನ್ನಿವೇಶದಲ್ಲಿ ಇರುವ ನಾವು, ಅಧಿಕಾರಿಗಳು ಕೇಳಿದ ಮಾತ್ರಕ್ಕೆ ಸಾವಿರಾರು ರೂಪಾಯಿ ಲಂಚದ ಹಣ ಕೊಡಲು ಸಾಧ್ಯ? ಎಂದು ಈ ಕುಟುಂಬ ಕಣ್ಣೀರು ಮಿಡಿಯುತ್ತಿದೆ.
ವಸತಿ ರಹಿತರ ಪಟ್ಟಿಗೆ ಸೇರ್ಪಡೆ
ಮಳೆಯಿಂದ ಬಿದ್ದಿರುವ ಮನೆಗಳ ಸಂಖ್ಯೆ 200 ಕ್ಕೂ ಹೆಚ್ಚಿದೆ. ಅದರಲ್ಲಿ ಜುಬೇದಾ ರಾಜೇಸಾಬ್ ಶಿರಬಡಗಿ ಅವರದ್ದೂ ಇದ್ದು, ವಸತಿರಹಿತರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಕುರಿತ ಸ್ಥಳ ಪರಿಶೀಲನೆ ವರದಿಯನ್ನೂ ಲಕ್ಷ್ಮೇಶ್ವರ ತಹಸೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ. ಪರಿಹಾರ ಹಾಗೂ ಇತರೇ ಸಮಸ್ಯೆಗಳಿಗೆ ಫಲಾನುಭವಿ ತಹಸೀಲ್ದಾರ್ ಕಚೇರಿಯನ್ನೇ ಸಂಪರ್ಕಿಸಬೇಕು.
– ಬೀರೇಶ್, ಪಿಡಿಒ, ಶಿಗ್ಲಿ
ಕಳೆದ ವರ್ಷವೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕುಟುಂಬಕ್ಕೆ ಇನ್ನೂ ಪರಿಹಾರ ಕೊಡಿಸದ ಗ್ರಾ.ಪಂ. ಆಡಳಿತ, ಈ ಬಾರಿಯ ಮಳೆ ಸಂತ್ರಸ್ತರಿಗೆ ಪರಿಹಾರ ಕೊಡಬಲ್ಲುದೇ ಎನ್ನುವುದು ಗ್ರಾಮಸ್ಥರ ಪ್ರಶ್ನೆ. ಈ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಕೊಡಿಸಿ, ಹೊಸದಾಗಿ ಸೂರು ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.